ADVERTISEMENT

ಈರುಳ್ಳಿಯನ್ನೇ ಬಳಸದ ಗ್ರಾಮ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 18:30 IST
Last Updated 19 ಜನವರಿ 2011, 18:30 IST

ಪಟ್ನಾ: ಇಲ್ಲಿನ ಬಂಕಾ ಜಿಲ್ಲೆಯ ಗ್ರಾಮವೊಂದರ ಜನರು ಕೇಂದ್ರ ಕೃಷಿ ಸಚಿವರ ವಿರುದ್ಧ ಯಾವುದೇ ಗೊಣಗಾಟ ನಡೆಸಿಲ್ಲ. ಕಾರಣ, ಇವರು ಈರುಳ್ಳಿಯನ್ನೇ ಬಳಸುವುದಿಲ್ಲ.

ಹೀಗಾಗಿ ‘ದುರ್ಲಭ ವಸ್ತುವಿನ’ ಬಗ್ಗೆ ಯಾಕೆ ಕೋಲಾಹಲವಾಗುತ್ತಿದೆ ಎಂಬುದು ಅವರ ಅರಿವಿಗೆ ಬಂದಿಲ್ಲ. ಆಶ್ಚರ್ಯವೆಂದರೆ ಈ ಗ್ರಾಮದ ಜನರು ಕಳೆದ 200 ವರ್ಷಗಳಿಂದಲೂ ಈರುಳ್ಳಿಯನ್ನು ಉಪಯೋಗಿಸಿಲ್ಲ.  ನಂಬಿ ಇಲ್ಲವೇ ಬಿಡಿ ಆದರೆ ಇದು ಸತ್ಯ.

ಇಲ್ಲಿಗೆ 275 ಕಿಮೀ ದೂರದಲ್ಲಿರುವ ಬಂಕಾದ ಅಮರ್‌ಪುರ್ ಬ್ಲಾಕ್‌ನ ಭಿಮ್‌ಸೆನ್ ಗ್ರಾಮದಲ್ಲಿ ಸುಮಾರು 500 ಮಂದಿ ವಾಸವಿದ್ದಾರೆ. ಚಿಕನ್ ಅಥವಾ ಮಟನ್ ತಯಾರಿಸಲೂ ಇವರು ಈರುಳ್ಳಿ ಬಳಸುವುದಿಲ್ಲ.  ಸಲಾಡ್ ಬೇಕೆಂದರೂ ಟೊಮೆಟೊ, ಸೌತೆಕಾಯಿ, ಕ್ಯಾರೆಟ್ ಮತ್ತು ಮೂಲಂಗಿಯಿಂದ ಸಿದ್ಧಪಡಿಸಲಾಗುತ್ತದೆ.ಆದರೆ ಈರುಳ್ಳಿ ಮಾತ್ರ ಇಲ್ಲ.

ಇದಕ್ಕೆ ಗ್ರಾಮದವರು ತಮ್ಮದೇ ಆದ ಕಾರಣವನ್ನು ನೀಡುತ್ತಾರೆ. ‘ 200 ವರ್ಷಗಳ ಹಿಂದೆ ಈ ಗ್ರಾಮ ಅಸ್ತಿತ್ವಕ್ಕೆ ಬಂದಾಗ ವಾಸಿಯಾಗಲಾರದ ಕಾಯಿಲೆಯೊಂದು ಪ್ಲೇಗ್ ರೀತಿಯಲ್ಲಿ ಹರಡಿತ್ತು. ದೇವಿಯ ಶಾಪದಿಂದಾಗಿ ಹೀಗಾಗಿತ್ತು ಎನ್ನಲಾಗುತ್ತದೆ. ಆ ಬಳಿಕ ಕಾಯಿಲೆ ನಿವಾರಣೆ ಆದರೂ ಆಗಿನಿಂದ ಗ್ರಾಮದ 200 ಮನೆಗಳಲ್ಲಿ ಯಾರೂ ಈರುಳ್ಳಿ ಬಳಸುವುದಿಲ್ಲ’ ಎಂದು ಗ್ರಾಮದ ಹಿರಿಯ ನಕುಲ್‌ಸಿಂಗ್ ಹೇಳುತ್ತಾರೆ.

ಈಗಿನ ಪೀಳಿಗೆಯವರು ಈ ಪರಂಪರೆ ಮುಂದುವರಿಸಿದ್ದಾರೆ. ‘200 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯಕ್ಕೆ ಗೌರವ ಸೂಚಿಸುವ ಅಂಗವಾಗಿ ಗ್ರಾಮದ ಯುವಜನರು ಕೂಡ ಈರುಳ್ಳಿಯಿಂದ ದೂರವೇ ಉಳಿದಿದ್ದಾರೆ’ ಎನ್ನುತ್ತಾರೆ ಗ್ರಾಮದ ಮತ್ತೊಬ್ಬ ಹಿರಿಯ ದಯಾ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.