ADVERTISEMENT

ಈಶಾನ್ಯ ಭಾರತದಲ್ಲಿ ಭಾರಿ ಭೂಕಂಪ 18 ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 15:00 IST
Last Updated 19 ಸೆಪ್ಟೆಂಬರ್ 2011, 15:00 IST

ಢಾಕಾ/ಕಠ್ಮಂಡು (ಪಿಟಿಐ): ಈಶಾನ್ಯ ಭಾರತ ಸೇರಿದಂತೆ ನೇಪಾಳ, ಬಾಂಗ್ಲಾದೇಶಗಳಲ್ಲಿ 6.8 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭಾರಿ ಸಾವು ನೋವಿನ ಶಂಕೆ ವ್ಯಕ್ತವಾಗಿದ್ದು, ವಾಯುಪಡೆ ವಿಮಾನಗಳನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಗಿದೆ. 18 ಮಂದಿ ಸಾವಿಗೀಡಾದ ಬಗ್ಗೆ ವರದಿಗಳು ಬಂದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಆತಂಕ ನೆಲೆಮಾಡಿದೆ.

ಭಾನುವಾರ ಸಂಜೆ 6.10ಕ್ಕೆ ಸರಿ ಸುಮಾರು ಒಂದು ನಿಮಿಷ ಭೂಮಿ ಕಂಪಿಸಿದೆ. ಸಿಕ್ಕಿಂನಲ್ಲಿನ ಇಂಡೊ ಟೆಬಿಟಿಯನ್ ಗಡಿ ಭದ್ರತಾ ಪಡೆಯ 2 ಕಟ್ಟಡಗಳು ನೆಲಸಮಗೊಂಡಿವೆ. ಪಶ್ಚಿಮ ಬಂಗಾಳದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಸಿಕ್ಕಿಂನಲ್ಲಿ 7, ಪಶ್ಚಿಮಬಂಗಾಳದಲ್ಲಿ 4, ಬಿಹಾರದಲ್ಲಿ ಇಬ್ಬರು ನೆರೆಯ ನೇಪಾಳದಲ್ಲಿ 5 ಮಂದಿ ಸಾವನ್ನಪ್ಪಿರುವುದಾಗಿ ಇಲ್ಲಿಯವರೆಗೆ ಬಂದ ವರದಿಗಳು ತಿಳಿಸಿವೆ. ಸಿಕ್ಕಿಂನಲ್ಲಿ ಸಾವಿಗೀಡಾದವರ ಪೈಕಿ ಇಬ್ಬರ ಸೈನಿಕರೂ ಸೇರಿದ್ದಾರೆ. ಒಬ್ಬ ಸೈನಿಕ ನಾಪತ್ತೆಯಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ADVERTISEMENT

ಆದಾಗ್ಯೂ, ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಸಿಕ್ಕಿಂ ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಕರೆದಿದ್ದಾರೆ.

ಭೂಕಂಪ ಭಾರಿ ಪ್ರಮಾಣದಲ್ಲಿ ಇತ್ತೆಂದು ತಜ್ಞರು ಹೇಳಿದ್ದು, ಎಲ್ಲೆಡೆ ಆತಂಕದ ವಾತಾವರಣ ನೆಲೆಸಿದೆ. ಇದರ ಕೇಂದ್ರ ಬಿಂದು ಸಿಕ್ಕಿಂ - ನೇಪಾಳದ ಗಡಿ ಪ್ರದೇಶದಲ್ಲಿತ್ತೆಂದು ಅಂದಾಜು ಮಾಡಲಾಗಿದೆ. ಕಂಪನದ ಅನುಭವ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಬಿಹಾರ, ಉತ್ತರಪ್ರದೇಶ,  ಹಾಗೂ ಜಾರ್ಖಾಂಡ್ ಗೂ ತಟ್ಟಿದ್ದು, ಎಲ್ಲೆಡೆ ಆತಂಕದ ವಾತಾವರಣ ನೆಲೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.