ADVERTISEMENT

ಈಶ್ವರಪ್ಪಗೆ ಚುನಾವಣಾ ಆಯೋಗದ ನೋಟಿಸ್

ಪ್ರಚಾರದಲ್ಲಿ ಪ್ರಚೋದನಕಾರಿ ಭಾಷಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 20:00 IST
Last Updated 12 ಏಪ್ರಿಲ್ 2013, 20:00 IST

ನವದೆಹಲಿ (ಪಿಟಿಐ): ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಮತ್ತು ಮಹಾರಾಷ್ಟ್ರದ ಗೃಹ ಸಚಿವ ಆರ್. ಆರ್. ಪಾಟೀಲ್ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಏಪ್ರಿಲ್ 13ರ ಸಾಯಂಕಾಲದ ಒಳಗೆ ಈ ನೋಟಿಸ್‌ಗೆ ಉತ್ತರಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಸೂಚನೆ ನೀಡದೇ ಕ್ರಮ ಕೈಗೊಳ್ಳಲಾಗುವುದು ಎಂದೂ ಆಯೋಗ ತಿಳಿಸಿದೆ.

ಈಶ್ವರಪ್ಪ ಅವರು ಏಪ್ರಿಲ್ 9ರಂದು ಶಿವಮೊಗ್ಗದಲ್ಲಿ ಕೋಮು ದ್ವೇಷ ಕೆರಳಿಸುವ ಭಾಷಣ ಮಾಡಿದ್ದರು. ಆರ್.ಆರ್. ಪಾಟೀಲ್,  ಏಪ್ರಿಲ್ 7ರಂದು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಭಾಷಣಮಾಡಿದ್ದರು.

`ನಿಮ್ಮ ಭಾಷಣದ ಸಿ.ಡಿ.ಯನ್ನು ಆಯೋಗ ವೀಕ್ಷಿಸಿದೆ. ನೀವು ಮಾಡಿರುವ ಭಾಷಣ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ' ಎಂದು ಈಶ್ವರಪ್ಪ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ದೂರು ದಾಖಲು
(ಶಿವಮೊಗ್ಗ ವರದಿ): ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಶಿವಮೊಗ್ಗ ನಗರ ಮತಗಟ್ಟೆ ಚುನಾವಣಾಧಿಕಾರಿ ಮಂಜುನಾಥ್ ಅವರು ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿಪುಲ್‌ಬನ್ಸಲ್ ಸೂಚನೆ ಮೇರೆಗೆ ದೂರು ದಾಖಲಿಸಲಾಗಿದೆ.

ಐಪಿಸಿ ಕಲಂ 153 (ಎ)- ಧರ್ಮ, ಜಾತಿ, ಜನಾಂಗದ ಆಧಾರದ ಮೇಲೆ ಗುಂಪುಗಳ ನಡುವೆ ವೈಮನಸ್ಸು ಸೃಷ್ಟಿಸುವುದು, 295 (ಎ)-ಉದ್ದೇಶಪೂರ್ವಕವಾಗಿ, ದುರುದ್ದೇಶದಿಂದ ಕೋಮು ಪ್ರಚೋದನೆ ಭಾವನೆ ಕೆರಳಿಸುವುದು, 298- ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಕಲಂ 125 ರ ಅಡಿ ಈಶ್ವರಪ್ಪ ವಿರುದ್ಧ ದೂರು ದಾಖಲಿಸಲಾಗಿದೆ.

`ಈಶ್ವರಪ್ಪ ಅವರು ಏ. 9ರಂದು ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ವೇದಿಕೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶಿವಮೊಗ್ಗದಲ್ಲಿ 68 ಎಳೆಯ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರು `ಲವ್ ಜಿಹಾದ್' ಹೆಸರಿನಲ್ಲಿ ಅಪಹರಿಸಿ, 6 ರಿಂದ 8 ತಿಂಗಳು ಬಳಸಿ, ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ದಾಖಲೆಗಳಿವೆ ಎಂಬುದೂ ಸೇರಿದಂತೆ ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಮಾತನಾಡಿ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ' ಎಂದು ದೂರಿನಲ್ಲಿ ಮಂಜುನಾಥ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.