ADVERTISEMENT

ಉಗ್ರರ ದಾಳಿಗೆ 12 ಬಲಿ

ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸ: ಹೊಣೆ ಹೊತ್ತ ‘ಶೋಹದಾ ಬ್ರಿಗೇಡ್‌’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 20:26 IST
Last Updated 26 ಸೆಪ್ಟೆಂಬರ್ 2013, 20:26 IST

ಜಮ್ಮು /ನವದೆಹಲಿ (ಪಿಟಿಐ/ ಐಎಎನ್ಎಸ್‌): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ  ಅಟ್ಟಹಾಸ ಮೆರೆದಿರುವ ಉಗ್ರರು ಗುರುವಾರ ಒಂದಾದ ಮೇಲೊಂದರಂತೆ ಪೊಲೀಸ್‌ ಠಾಣೆ ಮತ್ತು ಸೇನಾ ಶಿಬಿರದ ಮೇಲೆ ನಡೆಸಿದ ಅವಳಿ ಆತ್ಮಹತ್ಯಾ ದಾಳಿಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌   ಸೇರಿ 12 ಜನರು ಬಲಿಯಾಗಿದ್ದಾರೆ. ಇದರಲ್ಲಿ ಇಬ್ಬರು ನಾಗರಿಕರೂ ಸೇರಿದ್ದಾರೆ.

ಈ ಎರಡೂ ಆತ್ಮಹತ್ಯಾ ದಾಳಿಗಳು ಕೆಲವೇ ಗಂಟೆಗಳ ಅಂತರದಲ್ಲಿ ನಡೆದಿವೆ. ಸೇನಾ ಸಮವಸ್ತ್ರದಲ್ಲಿದ್ದ ಮೂವರು ಉಗ್ರರನ್ನು  ಕೊಲ್ಲಲಾಗಿದ್ದು, ಕಾರ್ಯಾ­ಚರಣೆ ಯಶಸ್ವಿಯಾಗಿ ಕೊನೆಗೊಂಡಿದೆ ಎಂದು ಸೇನಾಧಿಕಾರಿಗಳು  ನವ ದೆಹಲಿಯಲ್ಲಿ ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ  ವಿಶ್ವಸಂಸ್ಥೆಯ ಮಹಾಸಭೆ ವೇಳೆ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಪಾಕಿಸ್ತಾನದ ಪ್ರಧಾನಿ  ನವಾಜ್‌ ಷರೀಫ್‌ ಮಾತುಕತೆಗೆ ಕೇವಲ ಮೂರು ದಿನ ಬಾಕಿ ಇರುವಾಗಲೇ ಈ ದಾಳಿ ನಡೆದಿದೆ. ಈ ಬೆಳವಣಿಗೆ ಉಭಯ ನಾಯ­ಕರ ಮಾತುಕತೆ ಮೇಲೆ ಪರಿ­ಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು ಎಂದು ಮೂಲಗಳು ಹೇಳಿವೆ.

ಎಲ್‌ಇಟಿ ಉಗ್ರರು?: ಈ ಮೂವರೂ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್‌ ಎ ತೈಯಬಾ (ಎಲ್‌ಇಟಿ) ಉಗ್ರರಿರ­ಬಹುದು ಎಂಬ ಶಂಕೆ ಇದ್ದು,  ಅವರ ಗುರುತು ಪತ್ತೆ ಹಚ್ಚಬೇಕಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಉಗ್ರರ ಶವಗಳು ಸೇನೆಯ ವಶದಲ್ಲಿದ್ದು, ಅವರು 16ರಿಂದ 19 ವರ್ಷದೊಳಗಿ ನವರಾಗಿದ್ದಾರೆ. ಗುರುವಾರ ಬೆಳಗಿನ ಜಾವ ಗಡಿ ಮೂಲಕ ನುಸುಳಿ ರಬಹುದು ಎಂದು ಅವರು ಶಂಕಿಸಿ ದರು. ಕಳೆದ ಹತ್ತು ವರ್ಷದ ಅವಧಿ ಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಹೇಯ ದಾಳಿ ಇದಾಗಿದೆ ಎನ್ನಲಾಗಿದೆ.

ಹೊಣೆ ಹೊತ್ತ ಹೊಸ ಸಂಘಟನೆ: ಇದುವರೆಗೂ ಅಪರಿಚಿತವಾಗಿದ್ದ ‘ಶೋಹದಾ ಬ್ರಿಗೇಡ್‌’ ಎಂಬ ಹೊಸ ಭಯೋತ್ಪಾದನಾ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

ಸಂಘಟನೆಯ ವಕ್ತಾರ ಎಂದು ತನ್ನನ್ನು ಪರಿಚಯಿಸಿಕೊಂಡ ಸಮಿ­ಉಲ್ಲಾ ಹಕ್‌ ಎಂಬ ವ್ಯಕ್ತಿ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿ­ದ್ದಾನೆ. ದಾಳಿ ನಡೆಸಿದ ತಾವೆಲ್ಲ ಸ್ಥಳೀಯರು ಎಂದೂ ಆತ ಹೇಳಿಕೊಂಡಿದ್ದಾನೆ.

ಹುತಾತ್ಮರಲ್ಲಿ ಆರು ಪೊಲೀಸರು, ನಾಲ್ವರು ಸೇನಾ ಅಧಿಕಾರಿಗಳು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ. ಎಲ್ಲರ ಗುರುತನ್ನೂ ಪತ್ತೆ ಹಚ್ಚಲಾಗಿದೆ. ಗಾಯಾಳುಗಳನ್ನು ಸೇನಾ ಆಸ್ಪತ್ರೆಗೆ ಸೇರಿಸಲಾಗಿದೆ.

ತುರ್ತುಸಭೆ:  ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಉಪ ಮುಖ್ಯ ಮಂತ್ರಿ ತಾರಾಚಂದ್‌, ಗೃಹಖಾತೆ ಪ್ರಧಾನ ಕಾರ್ಯದರ್ಶಿ ಸುರೇಶ್‌ ಕುಮಾರ್‌, ಡಿಜಿಪಿ ಅಶೋಕ್‌ ಪ್ರಸಾದ್‌ ಸೇರಿದಂತೆ ಹಿರಿಯ ಪೊಲೀಸ್‌  ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡಿಗನಿಗೆ ಗಾಯ
ಅಶ್ವಸೇನಾ ಹಾಗೂ ಮೋಟಾರು ವಾಹನ ಪಡೆಯ ಯೂನಿಟ್‌ ಕಮಾಂಡಿಂಗ್‌ ಆಫೀಸರ್ ಕರ್ನಲ್‌ ಅವಿನ್‌ ಉತ್ತಯ್ಯ ಸೇರಿದಂತೆ ಸೇನಾ ಶಿಬಿರದ ಮೂವರು ಗಾಯ ಗೊಂಡು ಪಠಾಣ್‌ಕೋಟ್‌ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಯ್ಯ ಅವರು ಮಡಿಕೇರಿ ಮೂಲದವರು ಎನ್ನಲಾಗಿದೆ. ಸಿಪಾಯಿಗಳಾದ ಕಿರಣ್‌ಕುಮಾರ ರೆಡ್ಡಿ,  ಎಂ.ಎಸ್. ರಾವ್‌ ಮತ್ತು ದಾಯಾ ಸಿಂಗ್‌ ಮೃತಪಟ್ಟ ಇತರ ಯೋಧರು.

ಬೆನ್ನೆಲುಬಿಲ್ಲದ ರಾಜನೀತಿ: ಬಿಜೆಪಿ ಟೀಕೆ
ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ‘ಬೆನ್ನೆಲೆಬು ಇಲ್ಲದ ರಾಜನೀತಿ’ ಎಂದು ಕಟುವಾಗಿ ಟೀಕಿಸರುವ ಬಿಜೆಪಿ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಜೊತೆ ಮಾತುಕತೆ ಕೈಬಿಡುವಂತೆ ಒತ್ತಾಯಿಸಿದೆ.

ದಾಳಿಯನ್ನು ಖಂಡಿಸಿರುವ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌, ಈ ದಾಳಿಗೆ ಪಾಕಿಸ್ತಾನ ಹೊಣೆ ಎಂದಿದ್ದಾರೆ. ಇನ್ನಾದರೂ ಸರ್ಕಾರ ಮೃದು ಧೋರಣೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾತುಕತೆ ನಿಲ್ಲದು
‘ಶಾಂತಿ ಮಾತು ಕತೆಗೆ ಅಡ್ಡಿಪಡಿಸು­ವುದೇ ಈ ದಾಳಿ ಯ ಉದ್ದೇಶವಾ ಗಿದೆ.  ಈಗಾಗಲೇ ನಿಗದಿಯಾಗಿರು ವಂತೆ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರ ಜತೆ ನ್ಯೂಯಾರ್ಕ್‌ ನಲ್ಲಿ ಭಾನುವಾರ ಮಾತುಕತೆ ನಡೆಯಲಿದೆ’
ಪ್ರಧಾನಿ ಮನಮೋಹನ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.