ADVERTISEMENT

ಉಗ್ರರ ದಾಳಿ:8 ಪೊಲೀಸರ ಬಲಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 20:16 IST
Last Updated 16 ಜೂನ್ 2017, 20:16 IST
ಉಗ್ರರ ದಾಳಿ:8 ಪೊಲೀಸರ ಬಲಿ
ಉಗ್ರರ ದಾಳಿ:8 ಪೊಲೀಸರ ಬಲಿ   

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ  ಶುಕ್ರವಾರ ಸಂಜೆ ಉಗ್ರರು ನಡೆಸಿದ ದಾಳಿಯಲ್ಲಿ ಎಂಟು ಪೊಲೀಸರು ಹತರಾಗಿದ್ದಾರೆ. ಅನಂತನಾಗ್ ಜಿಲ್ಲೆಯ  ಅಚಬಲ್ ಪ್ರದೇಶದಲ್ಲಿ ಹೊಂಚುಹಾಕಿ ಕುಳಿತಿದ್ದ  ಶಸ್ತ್ರಸಜ್ಜಿತ ಉಗ್ರರ ಗುಂಪು ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಿದೆ.

ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ ಉಗ್ರರು ಅತ್ಯಂತ ಹತ್ತಿರದಿಂದ ಅವರ ಮುಖಕ್ಕೆ ಗುಂಡು ಹಾರಿಸಿದ್ದಾರೆ. ಇದರಿಂದ ಪೊಲೀಸರ ಮುಖಗಳು ಗುರುತು ಸಿಗದಷ್ಟು ವಿರೂಪಗೊಂಡಿವೆ.  ಮೃತ ಠಾಣಾಧಿಕಾರಿಯನ್ನು ಪುಲ್ವಾಮಾ ನಿಮಾಸಿ ಫಿರೋಜ್ ದರ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನಂತರ ಪೊಲೀಸರ  ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಉಗ್ರರು ಕೊಂಡೊಯ್ದಿದ್ದಾರೆ. ಮೂರು ವಾರದ ಅಂತರದಲ್ಲಿ ನಡೆದ  ಮತ್ತೊಂದು ದಾಳಿ ಇದಾಗಿದೆ.
ಮೂವರು ಉಗ್ರರ ಹತ್ಯೆ: ಅನಂತನಾಗ್ ಜಿಲ್ಲೆಯ ಬಿಜ್‌ಬೆಹರ ಸಮೀಪದ ಅರ್ವಾನಿ ಗ್ರಾಮದಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಶುಕ್ರವಾರ ಮಧ್ಯಾಹ್ನ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್–ಎ–ತಯಬಾ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಸೇರಿ ಮೂವರು ಉಗ್ರಗಾಮಿಗಳು ಹತ್ಯೆಗೀಡಾಗಿದ್ದಾರೆ.

ಗುಂಡಿನ ಚಕಮಕಿ ನಡೆದ ಸ್ಥಳದ ಸಮೀಪ ಮೂವರು ನಾಗರಿಕರು ಗುಂಡು ತಗುಲಿ ಮೃತಪಟ್ಟಿದ್ದು  ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಈ ಎನ್‌ಕೌಂಟರ್‌ಗೆ ಪ್ರತೀಕಾರವಾಗಿ  ಪಾಕಿಸ್ತಾನದ ಲಷ್ಕರ್‌ ಎ ತಯಬಾ ಈ ದಾಳಿ ನಡೆಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಮೂವರು ಉಗ್ರಗಾಮಿಗಳು ಅವಿತುಕೊಂಡಿದ್ದಾರೆ ಎಂಬ ಸುಳಿವಿನ ಮೇರೆಗೆ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ತಂಡದ ಸಿಬ್ಬಂದಿಯನ್ನು  ಒಳಗೊಂಡ ಜಂಟಿ ಕಾರ್ಯಾಚರಣೆ ಪಡೆ ಅರ್ವಾನಿ ಗ್ರಾಮವನ್ನು ಸುತ್ತುವರಿಯಿತು.

ಆದರೆ, ಉಗ್ರಗಾಮಿಗಳಿಗೆ ಪರಾರಿಯಾಗಲು ಅನುಕೂಲವಾಗುವಂತೆ ನಾಗರಿಕರು, ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸತೊಡಗಿದರು ಎಂದು ವರದಿಯಾಗಿದೆ.

ಕೊನೆಗೆ ಭದ್ರತಾ ಪಡೆಗಳು ಉಗ್ರರು ಅವಿತುಕೊಂಡಿದ್ದ ಎರಡು ಮನೆಗಳನ್ನು ಸುಧಾರಿತ ಸ್ಫೋಟಕ ಬಳಸಿ ನೆಲಸಮಗೊಳಿಸಿದರು ಎಂದು ವರದಿ ತಿಳಿಸಿವೆ.

ಬಂದ್‌ಗೆ ಕರೆ: ಭದ್ರತಾ ಪಡೆಗಳಿಂದ ನಾಗರಿಕರ ‘ಹತ್ಯೆ’ಯನ್ನು ಖಂಡಿಸಿ ಕಾಶ್ಮೀರ ಕಣಿವೆಯಲ್ಲಿ ಶನಿವಾರ ಬಂದ್ ಆಚರಿಸಬೇಕು ಎಂದು ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್‌್ಸನ ವಿವಿಧ ಬಣಗಳ ಮುಖಂಡರನ್ನು ಒಳಗೊಂಡ ‘ಜಂಟಿ ಪ್ರತಿರೋಧ ನಾಯಕತ್ವ’ ಶುಕ್ರವಾರ ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT