ADVERTISEMENT

ಉಗ್ರರ ವಿರುದ್ಧ ಮತ್ತೆ ಕಾರ್ಯಾಚರಣೆ

ಪಿಟಿಐ
Published 17 ಜೂನ್ 2018, 19:30 IST
Last Updated 17 ಜೂನ್ 2018, 19:30 IST
ಉಗ್ರರ ವಿರುದ್ಧ ಮತ್ತೆ ಕಾರ್ಯಾಚರಣೆ
ಉಗ್ರರ ವಿರುದ್ಧ ಮತ್ತೆ ಕಾರ್ಯಾಚರಣೆ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ‍ಪುನರಾರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಘೋಷಿಸಿದೆ.

ಮುಸ್ಲಿಮರ ಪವಿತ್ರ ತಿಂಗಳು ರಮ್ಜಾನ್‌ ಆರಂಭದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈಗ ರಮ್ಜಾನ್‌ ಮುಗಿದಿದೆ. ಕಾರ್ಯಾಚರಣೆಗೆ ನೀಡಿದ ವಿರಾಮವನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ.

ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಉಗ್ರರು ಶ್ರೀನಗರದಲ್ಲಿ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣ ಸೃ‌ಷ್ಟಿಸಲು ಕೇಂದ್ರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ಅಕ್ಷರಶಃ ಪಾಲಿಸಿದ ಭದ್ರತಾ ಪಡೆಗಳನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.

ಭಾರಿ ಪ್ರಚೋದನೆ ಉಂಟಾದರೂ ಭದ್ರತಾ ಪಡೆಗಳು ಸಂಯಮ ಪಾಲಿಸಿವೆ. ಮುಸ್ಲಿಮರು ಶಾಂತಿಯುತವಾಗಿ ರಮ್ಜಾನ್‌ ಆಚರಿಸಲು ಸಾಧ್ಯವಾಗುವಂತೆ ಭದ್ರತಾ ಪಡೆಗಳು ನೋಡಿಕೊಂಡಿವೆ ಎಂದು ರಾಜನಾಥ್‌ ಹೇಳಿದ್ದಾರೆ.

‌ಉಗ್ರರು ನಡೆಸುವ ದಾಳಿ ತಡೆಯಲು ಮತ್ತು ಹಿಂಸೆ ಹಾಗೂ ಹತ್ಯೆ ನಿಲ್ಲಿಸಲು ಈ ಹಿಂದಿನಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಅಂಕಿಅಂಶ

* 55 ಈ ವರ್ಷ ಹತ್ಯೆಯಾದ ಉಗ್ರರ ಸಂಖ್ಯೆ

* 27 ದಾಳಿಗೆ ಬಲಿಯಾದ ನಾಗರಿಕರ ಸಂಖ್ಯೆ

* 80 ಕಳೆದ ನಾಲ್ಕು ತಿಂಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.