ADVERTISEMENT

ಉತ್ಕೃಷ್ಟ ಸಂಸ್ಥೆ: ಸಂಭಾವ್ಯ ಪಟ್ಟಿಯಲ್ಲಿ ಐಐಎಸ್‌ಸಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಉತ್ಕೃಷ್ಟ ಸಂಸ್ಥೆ: ಸಂಭಾವ್ಯ ಪಟ್ಟಿಯಲ್ಲಿ ಐಐಎಸ್‌ಸಿ
ಉತ್ಕೃಷ್ಟ ಸಂಸ್ಥೆ: ಸಂಭಾವ್ಯ ಪಟ್ಟಿಯಲ್ಲಿ ಐಐಎಸ್‌ಸಿ   

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಯೋಜನೆಯ ಅಡಿಯಲ್ಲಿ ‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಎಂಬ ಸ್ಥಾನಮಾನ ನೀಡುವುದಕ್ಕಾಗಿ ಸಿದ್ಧಪಡಿಸಲಾಗಿರುವ ಸಂಭಾವ್ಯ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸ್ಥಾನ ಪಡೆದಿದೆ.

ಕೇಂದ್ರ ಸರ್ಕಾರವು ದೇಶದಾದ್ಯಂತ ಒಟ್ಟು 102 ಸಂಭಾವ್ಯ ಸಂಸ್ಥೆಗಳನ್ನು ಗುರುತಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರತೀ ವರ್ಷ ಅಖಿಲ ಭಾರತ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುವ ರ‍್ಯಾಂಕಿಂಗ್‌ ಆಧಾರದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಸ್ಥಾನಮಾನಕ್ಕಾಗಿ ಸಂಭಾವ್ಯ ಸಂಸ್ಥೆಗಳನ್ನು ಗುರುತಿಸಿದೆ.

ADVERTISEMENT

ಈ ಸ್ಥಾನಮಾನಕ್ಕಾಗಿ ಯುಜಿಸಿಯು ಇತ್ತೀಚೆಗೆ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅರ್ಜಿಗಳನ್ನೂ ಆಹ್ವಾನಿಸಿತ್ತು.

ಈಗ ಗುರುತಿಸಲಾಗಿರುವ ಶಿಕ್ಷಣ ಸಂಸ್ಥೆಗಳೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ವಾರದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಸಮಾಲೋಚನೆ ನಡೆಸಲಿದ್ದು, ‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಲು ಸಂಸ್ಥೆಗಳಿಗೆ ಉತ್ತೇಜನ ನೀಡಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

**

20 ಸಂಸ್ಥೆಗಳು

ದೇಶದಲ್ಲಿ 20 ‘ಉತ್ಕೃಷ್ಟ ಶಿಕ್ಷಣ ಸಂಸ್ಥೆ’ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಚಿಸಿದೆ. ಈ ಪೈಕಿ 10 ಸಂಸ್ಥೆಗಳು ಸರ್ಕಾರದ್ದಾದರೆ, ಇನ್ನು 10 ಖಾಸಗಿ ಸಂಸ್ಥೆಗಳು.

ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗುವ ಸಂಸ್ಥೆಗಳನ್ನು ಡೀಮ್ಡ್‌ ವಿಶ್ವವಿದ್ಯಾಲಯಗಳು ಎಂದು ಕೇಂದ್ರ ಪರಿಗಣಿಸಲಿದೆ. ಶಿಕ್ಷಣದ ಗುಣಮಟ್ಟ ಮತ್ತು ಮಾನದಂಡಗಳಲ್ಲಿ ‘ಜಾಗತಿಕ ಮಟ್ಟದ’ ಸಂಸ್ಥೆಯಾಗಿ ಸಾಧನೆ ಮಾಡಲು ಇವುಗಳಿಗೆ ಶೈಕ್ಷಣಿಕವಾಗಿ, ಆಡಳಿತಾತ್ಮಕ ಮತ್ತು ಹಣಕಾಸಿನ ವಿಚಾರಗಳಲ್ಲಿ ಸಂಪೂರ್ಣ ಸ್ವಾಯತ್ತೆಯನ್ನೂ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.