ADVERTISEMENT

ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಫೋಟಕ ಪತ್ತೆ: ಎನ್‌ಐಎ ತನಿಖೆಗೆ ಸಿಎಂ ಆದೇಶ

ಪಿಟಿಐ
Published 14 ಜುಲೈ 2017, 19:13 IST
Last Updated 14 ಜುಲೈ 2017, 19:13 IST
ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಫೋಟಕ ಪತ್ತೆ: ಎನ್‌ಐಎ ತನಿಖೆಗೆ ಸಿಎಂ ಆದೇಶ
ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಫೋಟಕ ಪತ್ತೆ: ಎನ್‌ಐಎ ತನಿಖೆಗೆ ಸಿಎಂ ಆದೇಶ   

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ವಸ್ತು ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಸದನಕ್ಕೆ ತಿಳಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ತನಿಖೆ ನಡೆಸಲು ಸದನ ಸರ್ವಾನುಮತದಿಂದ ಶಿಫಾರಸು ಮಾಡಿದೆ.

ಇಂದು ಬೆಳಿಗ್ಗೆ ಸದನ ಸಭೆ ಆರಂಭವಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲಿ ತುರ್ತು ಭದ್ರತಾ ಸಭೆ ನಡೆಸಲಾಯಿತು. 

ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್‌ ಅವರು, ಸದನದಲ್ಲಿ ವಿರೋಧ ಪಕ್ಷದ ನಾಯಕ ರಾಮ್‌ ಗೋವಿಂದ ಚೌಧರಿ ಅವರು ಕೂರುವ ಆಸನದ ಬಳಿ ಪೇಪರ್‌ನಲ್ಲಿ ಸುತ್ತಿಟ್ಟಿದ್ದ ಬಿಳಿ ಪುಡಿ ಸಿಕ್ಕಿದೆ ಎಂದು ತಿಳಿಸಿದರು.

ADVERTISEMENT

ಈ ಸ್ಫೋಟಕ ಜುಲೈ 12ರಂದು ಸ್ವಚ್ಛತಾ ಸಿಬ್ಬಂದಿಗೆ ದೊರೆತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗಾಗಿ ಪುಡಿಯನ್ನು ಕಳುಹಿಸಿಕೊಡಲಾಗಿದ್ದು, ಅದು ಅಪಾಯಕಾರಿ ಪ್ಲಾಸ್ಟಿಕ್ ಸ್ಫೋಟಕ ಪಿಇಟಿಎನ್‌(ಪೆಂಟ್ರೇಥೋಟೊಲ್‌ ಟೆಟ್ರಾನಿಟ್ರೇಟ್‌) ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.

ಸ್ಫೋಟಕ ಮತ್ತೆ ಹಚ್ಚುವಲ್ಲಿ ಶ್ವಾನ ತಂಡ ವಿಫಲವಾಗಿದೆ. ಆರಂಭದಲ್ಲಿ ಇದು ಕೇವಲ ಪುಡಿ ಅಥವಾ ರಾಸಾಯನಿಕ ಎಂದು ಭಾವಿಸಲಾಗಿತ್ತು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇದು ಪಿಇಟಿಎನ್ ಎಂದು ಗೊತ್ತಾಗಿದೆ. ಅದು ಉತ್ತಮ ಗುಣಮಟ್ಟದ ಹೆಕ್ಸೋಜಿನ್‌ ಮತ್ತು ಪ್ಲ್ಯಾಸ್ಟಿಕ್‌ ಸ್ಫೋಟಕವಾಗಿದೆ ಎಂದು ಅವರು ಮಾಹಿತಿ ನೀಡಿದರು.

(ಉತ್ತರ ಪ್ರದೇಶದ ವಿಧಾನ ಭವನದಲ್ಲಿ ಸ್ಫೋಟಕ ಪತ್ತೆಯಾದ ನಂತರ  ಪೊಲೀಸರು, ಭವನದ ಆವರಣ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಿದರು)

ಪತ್ತೆಯಾಗಿರುವ ಸ್ಫೋಟಕ ವಸ್ತುವಿನ ಪ್ರಮಾಣ 150 ಗ್ರಾಂ ಇದೆ. ತಜ್ಞರು ಹೇಳುವಂತೆ 500 ಗ್ರಾಂನಷ್ಟು ಈ ಸ್ಫೋಟಕ ವಸ್ತುವನ್ನು ಬಳಸಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಿರೋಧ ಪಕ್ಷದ ನಾಯಕರು ಕೂರುವ ಬೆಂಚಿನಿಂದ ಮೂರನೇ ಬೆಂಚಿನ ಅಡಿ ಸ್ಫೋಟಕ ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ಸದನದ ಭದ್ರತೆ ವಿಚಾರವಾಗಿ ಇದು ಅಪಾಯಕಾರಿ ಭಯೋತ್ಪಾದಕ ಪಿತೂರಿಯ ಭಾಗವಾಗಿದೆ ಮತ್ತು ಇದರ ಸತ್ಯಾಂಶ ಬಹಿರಂಗಗೊಳ್ಳಬೇಕು. ಈ ಕುರಿತು ಎನ್‌ಐಎಯಿಂದ ತನಿಖೆ ನಡೆಸಲಾಗುವುದು ಎಂದು ಯೋಗಿ ಆದಿತ್ಯನಾಥ್‌ ಹೇಳಿದರು.

**

ಸ್ಫೋಟಿಸುವ ಬೆದರಿಕೆ–  ಬಂಧನ

ಲಖನೌ: ಉತ್ತರಪ್ರದೇಶ ವಿಧಾನ ಸಭೆಯನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ಪೊಲೀಸರು ದೇವರಿಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಫರ್ಹಾನ್ ಎಂದು ಗುರುತಿಸಲಾಗಿದ್ದು, ಈತ ಪೊಲೀಸರಿಗೆ ಕರೆ ಮಾಡಿ ಆಗಸ್ಟ್ 15ರಂದು ವಿಧಾನ ಭವನ ಸ್ಫೋಟಿಸುವ ಬೆದರಿಕೆ ಹಾಕಿದ್ದ.

ಬಂಧಿತನ ವಿಚಾರಣೆಗೆ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ದೇವರಿಯ ಜಿಲ್ಲೆಗೆ ಧಾವಿಸಿದ್ದಾರೆ.

ವಿಧಾನಸಭೆಯಲ್ಲಿ ಪತ್ತೆಯಾಗಿರುವ ಸ್ಫೋಟಕದ ಬಗ್ಗೆಯೂ ವಿಚಾರಣೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

**

ವಿಧಾನ ಭವನ ಸ್ಫೋಟಿಸಬಹುದು

ಈ ವಾಸನೆರಹಿತ ರಾಸಾಯನಿಕವನ್ನು ಸುಲಭವಾಗಿ ಪತ್ತೆ ಹಚ್ಚುವುದು ಕಷ್ಟ. 150 ಗ್ರಾಂ ರಾಸಾಯನಿಕದಿಂದ ಇಡೀ ವಿಧಾನ ಭವನವನ್ನೇ ಸ್ಫೋಟಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಭದ್ರತಾ ಲೋಪ ಮತ್ತು ಉಗ್ರರ ಕೈವಾಡದ ಶಂಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.