ಡೆಹ್ರಾಡೂನ್ (ಪಿಟಿಐ): ಬದರಿನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 150 ಭಕ್ತರನ್ನು ಮಂಗಳವಾರ ರಕ್ಷಿಸುವುದರೊಂದಿಗೆ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿರುವ ಬೆನ್ನಲ್ಲೇ, ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಸುಮಾರು 170 ಹಳ್ಳಿಗಳಲ್ಲಿ ಆಹಾರಧಾನ್ಯಗಳ ಕೊರತೆ ಕಾಣಿಸಿಕೊಂಡಿದ್ದು, ಸರ್ಕಾರಕ್ಕಿದು ಹೊಸ ತಲೆನೋವಾಗಿ ಪರಿಣಮಿಸಿದೆ.
ಮೇಘಸ್ಫೋಟ ಸಂಭವಿಸಿ 17 ದಿನಗಳು ಕಳೆದಿದ್ದು, ಬದರಿನಾಥದಲ್ಲಿ ಪ್ರವಾಹಕ್ಕೆ ಬಲಿಯಾದ ಅವಶೇಷಗಳನ್ನು ತೆರೆವುಗೊಳಿಸುವುದು ಹಾಗೂ ಕೊಳೆತು ನಾರುತ್ತಿರುವ ಶವಗಳ ಅಂತ್ಯಸಂಸ್ಕಾರ ಮಾಡುವುದು ಸ್ಥಳೀಯ ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಕಳೆದು ಎರಡು ದಿನಗಳಿಂದ ಮಳೆಯಿಂದಾಗಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲ. ಇವರೆಗೆ ಹಲವಾರು ಮೃತದೇಹಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನೂ 36 ಶವಗಳ ಅಂತ್ಯ ಸಂಸ್ಕಾರ ನಡೆಸಬೇಕಾಗಿದೆ.
ಬದರಿನಾಥ ಧಾಮದಲ್ಲಿ ತೊಂದರೆಗೆ ಸಿಲುಕಿದ್ದ ಎಲ್ಲ ಭಕ್ತರನ್ನು ರಕ್ಷಿಸಲಾಗಿದೆ. ಸದ್ಯ ಕೆಲ ಸ್ಥಳೀಯರು ಹಾಗೂ ನೇಪಾಳಿ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯ ಬಾಕಿ ಇದ್ದು, ಸಂಜೆಯ ವೇಳೆಗೆ ಹವಾಮಾನ ಪೂರಕವಾಗಿದ್ದರೆ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಚಮೋಲಿ ಜಿಲ್ಲೆಯ ಮ್ಯಾಜಿಸ್ಟ್ರೆಟ್ ಎಸ್.ಎ.ಮುರುಗೇಶನ್ ಹೇಳಿದರು.
ಭೀಕರ ಪ್ರವಾಹದಿಂದಾಗಿ ಅಲಕನಂದಾ ನದಿಗೆ ಲಂಬಗರ್ ಬಳಿ ಕಟ್ಟಲಾಗಿರುವ ಸೇತುವೆಗೆ ಪೂರ್ತಿಯಾಗಿ ಹಾನಿಗೊಂಡಿದ್ದು, ಇದರ ರಿಪೇರಿಗೆ ಕನಿಷ್ಠ 2-3 ತಿಂಗಳ ಸಮಯ ಬೇಕಾಗುತ್ತದೆ ಎಂದು ಮುರುಗೇಶನ್ ತಿಳಿಸಿದರು.
ಕುಗ್ರಾಮಗಳಲ್ಲಿರುವವರ ನೆರವಿಗೆ ಧಾವಿಸಲು ಹಾಗೂ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ದಾರಿಯದೇ ದೊಡ್ಡ ಸಮಸ್ಯೆಯಾಗಿದೆ. ಆದರೂ ಕೆಲ ಸೀಮಿತ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಗೌರಿಕುಂಡ್-ಕೇದಾರ ಹೆದ್ದಾರಿಯ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ರುದ್ರಪ್ರಯಾಗ್ ಜಿಲ್ಲೆಯ 170 ಹಳ್ಳಿಗಳಲ್ಲಿ ಆಹಾರಧಾನ್ಯಗಳ ಸಮಸ್ಯೆ ತಲೆದೊರಿದೆ. ಆದರೆ ಜಿಲ್ಲೆಯಲ್ಲಿರುವ ಕಾಳಿಮಠ್, ಚಂದ್ರಪುರಿ ಹಾಗೂ ಸೌರಿ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.