ADVERTISEMENT

ಉತ್ತರಾಖಂಡ ಚುನಾವಣೆ: ಬಿಜೆಪಿಗೆ ಬಂಡಾಯ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಡೆಹ್ರಾಡೂನ್(ಪಿಟಿಐ): ಇದೇ ತಿಂಗಳ 30ರಂದು ಉತ್ತರಾಖಂಡದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಟಿಕೆಟ್ ಹಂಚಿಕೆಗೆ ಮುನ್ನವೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಬಂಡಾಯ ಕಾಣಿಸಿಕೊಂಡಿದ್ದು ಬಿಜೆಪಿ ಹೆಚ್ಚಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

ಪಕ್ಷಗಳ ಮೂಲ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ 24ಕ್ಕೂ ಹೆಚ್ಚು ಚುನಾವಣಾ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಹೊಂದಿದೆ.

ಈ ನಡುವೆ ಕಾಂಗ್ರೆಸ್ ಆಂತರಿಕ ಬಂಡಾಯಗಾರರನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ಹಾಲಿ ಶಾಸಕರುಗಳಿಗೆ ಟಿಕೆಟ್ ನೀಡಿದೆ. ಆದರೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ 36  ಶಾಸಕರ ಪೈಕಿ 12 ಮಂದಿಯನ್ನು ಚುನಾವಣಾ ಕಣದಿಂದ ದೂರ ಇರಿಸಿ ಹೆಚ್ಚಿನ ಬಂಡಾಯವನ್ನು ಎದುರು ಹಾಕಿಕೊಂಡಿದೆ.

ADVERTISEMENT

ಪಶು ಸಂಗೋಪನಾ ಇಲಾಖೆಯ ಮಾಜಿ ಸಚಿವ ಮಂತ್ರಿ ಪ್ರಸಾದ್ ನೈಥಾನಿ  ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಬಿಟ್ಟರೆ ಕಾಂಗ್ರೆಸ್ ಪಕ್ಷ ಅಂಥ ಗಂಭೀರ ಸ್ವರೂಪದ ತೊಂದರೆಯನ್ನೇನೂ ಅನುಭವಿಸುತ್ತಿಲ್ಲ.

ಪಕ್ಷದ ವರಿಷ್ಠರು ಕಡೆಗಣಿಸಿದ್ದರಿಂದ ಮಾಜಿ ಮುಖ್ಯಮಂತ್ರಿ ಎನ್.ಡಿ ತಿವಾರಿ ಮೊದಲಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ನಂತರ ಅವರು ಸೋದರ ಸಂಬಂಧಿ ಮನೀಶ್ ತಿವಾರಿ ಹಾಗೂ ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಆರ್ಯೇಂದರ್ ಶರ್ಮಾ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಅಸಮಾಧಾನಗೊಂಡಿರುವ ನೈಥಾನಿ, ದೇವಪ್ರಯಾಗ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಈಗಾಗಲೇ ತಯಾರಿ ನಡೆಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಜೋತ್ ಸಿಂಗ್ ಬಿಸ್ತ್ ಹಾಗೂ ಕೇಂದ್ರದಲ್ಲಿ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವರಾಗಿರುವ  ಹರೀಶ್ ರಾವತ್  ಧನೌಲ್ತಿ ಪ್ರದೇಶದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ ಮರಳಿದ ಎನ್.ಡಿ. ತಿವಾರಿ

ಡೆಹ್ರಾಡೂನ್ (ಪಿಟಿಐ): ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾಗಿ ಎರಡು ವರ್ಷಗಳಿಂದ ರಾಜಕಾರಣದಿಂದ ದೂರವೇ ಇದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಎನ್.ಡಿ. ತಿವಾರಿ ಅವರು ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ  ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ.

ಉಧಮ್‌ಸಿಂಗ್ ನಗರ ಜಿಲ್ಲೆಯ ಗದಾರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ತಿವಾರಿ ಅವರ ಸೋದರ ಸಂಬಂಧಿ ಮನಿಶ್ ತಿವಾರಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಎನ್.ಡಿ. ತಿವಾರಿ ಕೂಡ ಹಾಜರಿದ್ದರು.
 ಕಾಂಗ್ರೆಸ್ ಟಿಕೆಟ್ ದೊರಕಿಸಿಕೊಡುವಲ್ಲಿಯೂ ಎನ್.ಡಿ. ತಿವಾರಿ ಅವರ ಪಾತ್ರ ಇದೆ. ಕಾಂಗ್ರೆಸ್‌ನ ಅನೇಕ ಮುಖಂಡರು ಮನಿಶ್‌ಗೆ ಟಿಕೆಟ್ ನೀಡಬಾರದು ಎಂದು ಪ್ರಬಲವಾಗಿ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.