ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಮಳೆ ಸಂತ್ರಸ್ಥ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ಭಾನುವಾರ ನಸುಕಿನಲ್ಲಿ ಸ್ವಲ್ಪ ಕಾಲ ಸ್ಥಗಿತಗೊಳಿಸಲಾಗಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಮಳೆ ಬಿಟ್ಟ ಬಳಿಕ, ಪುನಃ ಮಳೆ ಸುರಿವ ಭೀತಿಯ ನಡುವೆ ಸಮರೋಪಾದಿಯಲ್ಲಿ ಪುನರಾರಂಭಿಸಲಾಗಿದ್ದು, ಎತ್ತರ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಸುಮಾರು 22,000 ಮಂದಿ ಯಾತ್ರಾರ್ಥಿಗಳನ್ನು ರಕ್ಷಿಸುವ ಯತ್ನವನ್ನು ತೀವ್ರಗೊಳಿಸಲಾಗಿದೆ.
ಈ ನಡುವೆ ಪ್ರದೇಶದಲ್ಲಿ ಸೋಮವಾರದಿಂದ ಮತ್ತ ವರ್ಷಧಾರೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆಯ ಪ್ರಕೋಪದಿಂದ ತೀವ್ರ ಹಾನಿಗೊಳಗಾಗಿರುವ ರುದ್ರಪ್ರಯಾಗ, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳಿಂದ ಸುಮಾರು 70,000 ಮಂದಿ ಯಾತ್ರಾರ್ಥಿಗಳನ್ನು ಈವರೆಗೆ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಹಿಮಾಲಯ ತಪ್ಪಲಿನ ಖ್ಯಾತ ದೇವಾಲಯಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳು ಈ ಭಾಗದಲ್ಲೇ ಇದ್ದು ಮುಂಗಾರು ಮಳೆಯ ಅಬ್ಬರದಿಂದ ತತ್ತರಿಸಿವೆ.
ಕಳೆದ ವಾರ ಸಂಭವಿಸಿದ ಮೇಘಸ್ಫೋಟದಲ್ಲಿ ತೀವ್ರ ಅನಾಹುತದಿಂದ ತತ್ತರಿಸಿರುವ ಈ ರಾಜ್ಯದಲ್ಲಿ 40ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳು ಮತ್ತು 10,000 ಮಂದಿ ಸೇನೆ ಹಾಗೂ ಅರೆ ಸೇನಾ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದಾರೆ.
ಕಡಿದುಹೋಗಿದ್ದ ಇಲ್ಲವೇ ಬಿರುಕು ಬಿಟ್ಟಿದ್ದ ಹಲವಾರು ರಸ್ತೆಗಳನ್ನು ದುರಸ್ತಿಗೊಳಿಸಲಾಗಿರುವ ಕಾರಣ ಎತ್ತರದ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಾರ್ಥಿಗಳ ರಕ್ಷಣೆ ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯಕ್ಕೆ ವೇಗ ಬರಲಿದೆ ಎಂದು ಸೇನಾ ಸಿಬ್ಬಂದಿ ಹೇಳಿದರು.
ಸಿಕ್ಕಿಹಾಕಿಕೊಂಡಿರುವ ಯಾತ್ರಾರ್ಥಿಗಳ ರಕ್ಷಣೆ ಸಲುವಾಗಿ ಬದರಿನಾಥದ ಬಳಿಯ ಪ್ರದೇಶವೊಂದರಲ್ಲಿ ಸುಮಾರು 50 ಕಿಮೀಯಷ್ಟು ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಐಟಿಬಿಪಿ ಮಹಾನಿರ್ದೇಶಕ ಅಮಿತ್ ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.