ಡೆಹ್ರಾಡೂನ್/ ನವದೆಹಲಿ (ಪಿಟಿಐ): ಉತ್ತರಾಖಂಡದಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಸ್ಪಷ್ಟ ಬಹುಮತ ಪಡೆಯುವ ಸಲುವಾಗಿ ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್, ಬಿಜೆಪಿಗಳೆರಡೂ ಹಗ್ಗಜಗ್ಗಾಟ ನಡೆಸುತ್ತಿವೆ.
ಒಂದೆಡೆ ತಾನು ಸರ್ಕಾರ ರಚಿಸುವುದಾಗಿ ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಕೂಡ ಅದೇ ರೀತಿಯ ಹೇಳಿಕೆ ನೀಡುತ್ತಿದೆ.
`ಪಕ್ಷದ ಹೊಸ ನಾಯಕನನ್ನು ಹೈಕಮಾಂಡ್ ಆರಿಸಲಿ, ಬಳಿಕ ನಾವು ಸರ್ಕಾರ ರಚಿಸುತ್ತೇವೆ. ಸರ್ಕಾರ ರಚಿಸಲು ಅಗತ್ಯವಾದ ಸದಸ್ಯರ ಸಂಖ್ಯೆ ನಮ್ಮಲ್ಲಿದ್ದು ನಾವೇ ಸರ್ಕಾರ ರಚಿಸುತ್ತೇವೆ~ ಎಂದು ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಯಶ್‌ಪಾಲ್ ಆರ‌್ಯ ಹೇಳಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ಪಾಳಯದಲ್ಲೂ ಚಟುವಟಿಕೆಗಳು ಗರಿಗೆದರಿವೆ. `ಈ ಬಾರಿ ರಾಜ್ಯದಲ್ಲಿ ಹೋಳಿಯಾಡುತ್ತೇವೆ. ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಅವಕಾಶ ನೀಡುವುದಿಲ್ಲ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ನವದೆಹಲಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
70 ಮಂದಿ ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 32 ಹಾಗೂ ಬಿಜೆಪಿ 31 ಸ್ಥಾನಗಳನ್ನು ಪಡೆದಿವೆ. ಎರಡೂ ಪಕ್ಷಗಳ ನಡುವೆ ಸರ್ಕಾರ ರಚಿಸಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಎಸ್‌ಪಿ ಮೂರು, ಉತ್ತರಾಖಂಡ್ ಕ್ರಾಂತಿ ದಳ ಒಂದು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮೂರು ಸ್ಥಾನಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.