ADVERTISEMENT

ಉತ್ತರ ಪ್ರದೇಶದಲ್ಲಿ ಅತಂತ್ರ ವಿಧಾನಸಭೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಮತಗಟ್ಟೆ ಸಮೀಕ್ಷೆ

ನವದೆಹಲಿ: ಒಟ್ಟು 403 ಸ್ಥಾನಗಳ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಏಳು ಹಂತಗಳ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)ವು ಸ್ಪಷ್ಟ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, `ಅತಂತ್ರ ವಿಧಾನಸಭೆ~ ಸೃಷ್ಟಿಯಾಗುವ ಸೂಚನೆಗಳಿವೆ ಎಂದು ವಿವಿಧ ಟಿವಿ ಸುದ್ದಿ ಚಾನೆಲ್‌ಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ಶನಿವಾರ ತಿಳಿಸಿವೆ.

 

ಎರಡನೇ ದೊಡ್ಡ ಪಕ್ಷವಾಗಲಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2007ರ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಈ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ನಾಲ್ಕು ಮತಗಟ್ಟೆ ಸಮೀಕ್ಷೆಗಳಲ್ಲಿ `ಹೆಡ್‌ಲೈನ್ಸ್ ಟುಡೇ~ಯು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಎಸ್‌ಪಿಗೆ 195-210 ಸ್ಥಾನ ಮತ್ತು ದಿ ನ್ಯೂಸ್ 24-ಚಾಣಕ್ಯವು 185 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿವೆ.
 
2007ರ ವಿಧಾನಸಭಾ ಚುನಾವಣೆಯಲ್ಲಿ ದೂಳೀಪಟವಾಗಿದ್ದ ಈ ಪಕ್ಷವು ಕೇವಲ 97 ಸ್ಥಾನಗಳನ್ನು ಜಯಿಸಿತ್ತು. ಹಾಲಿ ಮುಖ್ಯಮಂತ್ರಿ ಮಾಯಾವತಿ ನಾಯಕತ್ವದ ಬಿಎಸ್‌ಪಿಯು ಹೆಡ್‌ಲೈನ್ಸ್ ಟುಡೇ ಪ್ರಕಾರ 88-98 ಹಾಗೂ ಇತರ ಎರಡು ಸಮೀಕ್ಷೆಗಳಲ್ಲಿ 85-86 ಮತ್ತು ಮೂರನೆಯದರಲ್ಲಿ 126 ಸ್ಥಾನಗಳನ್ನು ಜಯಿಸುವುದಾಗಿ ಹೇಳಿದೆ.

ಈ ದಲಿತ ಪರ ಪಕ್ಷವು ಕಳೆದ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಎಸ್‌ಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಹೆಡ್‌ಲೈನ್ಸ್ ಟುಡೇಯು ಬಿಜೆಪಿಗೆ 50-56 ಮತ್ತು ಕಾಂಗ್ರೆಸ್-ಆರ್‌ಎಲ್‌ಡಿಗೆ  38-42 ಸ್ಥಾನಗಳನ್ನು ನೀಡಿದ್ದು, ಪಕ್ಷೇತರರು ಮತ್ತು ಇತರರು 12-18 ಸ್ಥಾನಗಳನ್ನು ಪಡೆಯುವುದಾಗಿ ತಿಳಿಸಿದೆ.

ದಿ ಸ್ಟಾರ್ ನ್ಯೂಸ್-ಎಸಿ ನೆಲ್ಸನ್ ಮತಗಟ್ಟೆ ಸಮೀಕ್ಷೆಯು ಎಸ್‌ಪಿ 160 ಸ್ಥಾನಗಳನ್ನು, ಬಿಎಸ್‌ಪಿ 86 ಸ್ಥಾನಗಳನ್ನು, ಬಿಜೆಪಿ 80 ಸ್ಥಾನಗಳನ್ನು, ಕಾಂಗ್ರೆಸ್ 58 ಸ್ಥಾನಗಳನ್ನು ಹಾಗೂ ಅದರ ಮಿತ್ರಪಕ್ಷ ಅಜಿತ್ ಸಿಂಗ್ ನಾಯಕತ್ವದ ಆರ್‌ಎಲ್‌ಡಿ 12 ಸ್ಥಾನಗಳನ್ನು (ಇವೆರಡು ಒಟ್ಟು 70) ಜಯಿಸಲಿವೆ ಎಂದು ತಿಳಿಸಿದೆ. ಪಕ್ಷೇತರರು ಮತ್ತು ಇತರರು ಏಳು ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿದೆ.

ಇಂಡಿಯಾ ಟಿವಿ-ಸಿ ವೋಟರ್ ಮತಗಟ್ಟೆ ಸಮೀಕ್ಷೆಯು ಎಸ್‌ಪಿಗೆ 137-145 ಸ್ಥಾನಗಳನ್ನು, ಬಿಎಸ್‌ಪಿಗೆ 122-130 ಸ್ಥಾನಗಳನ್ನು, ಬಿಜೆಪಿಗೆ 79-87 ಸ್ಥಾನಗಳನ್ನು, ಕಾಂಗ್ರೆಸ್-ಆರ್‌ಎಲ್‌ಡಿಗೆ 39-55 ಸ್ಥಾನಗಳನ್ನು ಹಾಗೂ ಇತರರು 2-17 ಸ್ಥಾನಗಳನ್ನು ಗಳಿಸುವುದಾಗಿ ನುಡಿದಿದೆ.

ನ್ಯೂಸ್ 24 ಮತ್ತು ಟುಡೇಯ ಚಾಣಕ್ಯ ಚಾನೆಲ್‌ಗಳು ಎಸ್‌ಪಿಗೆ 185,  ಬಿಎಸ್‌ಪಿ 85, ಬಿಜೆಪಿ 55, ಕಾಂಗ್ರೆಸ್ 55 ಹಾಗೂ ಇತರರು 23 ಸ್ಥಾನಗಳನ್ನು ಪಡೆಯುವುದಾಗಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.