ADVERTISEMENT

ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು; ವಿರೋಧ ಪಕ್ಷಗಳ ಮೈತ್ರಿಗೆ ಗೆಲುವು

ಏಜೆನ್ಸೀಸ್
Published 31 ಮೇ 2018, 9:49 IST
Last Updated 31 ಮೇ 2018, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರವು ನಾಲ್ಕು ವರ್ಷಗಳನ್ನು ಪೂರ್ತಿಗೊಳಿಸಿದ ಬೆನ್ನಿಗೇ ನಡೆದ ಲೋಕಸಭೆಯ ನಾಲ್ಕು ಮತ್ತು ವಿವಿಧ ವಿಧಾನಸಭೆಗಳ ಹತ್ತು ಕ್ಷೇತ್ರಗಳ ಉಪಚುನಾವಣೆಯ ಬಹುತೇಕ ಸ್ಥಾನಗಳಲ್ಲಿ ಬಿಜೆಪಿ ಮುಗ್ಗರಿಸಿದೆ.

ಕೈರಾನಾ(ಉತ್ತರಪ್ರದೇಶ): ಇಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ತಬಸ್ಸುಮ್‌ ಹಸನ್‌ ವಿಜಯ ಸಾಧಿಸಿದ್ದಾರೆ. ಈ ಬಾರಿ, ಸಮಾಜವಾದಿ ಪಕ್ಷ, ಕಾಂಗ್ರೆಸ್‌, ಬಿಎಸ್‌ಪಿ ಸೇರಿ ಎಲ್ಲ ವಿರೋಧ ಪಕ್ಷಗಳು ತಬಸ್ಸಮ್‌ ಅವರನ್ನು ಬೆಂಬಲಿಸಿದ್ದವು. ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಅರಳಿತ್ತು.

ಪಾಲ್ಘರ್‌(ಮಹಾರಾಷ್ಟ್ರ): ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗವಿತ್‌ ವಿಜಯಮಾಲೆ ಧರಿಸಿದ್ದಾರೆ. 2014ರಲ್ಲಿ ಇಲ್ಲಿಂದ ಗೆದ್ದಿದ್ದ ಚಿಂತಾಮನ್‌ ವನಗಾ ಅವರ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆಯಿತು. ಶಿವಸೇನೆಯಿಂದ ಚಿಂತಾಮನ್‌ ಮಗ ಶ್ರೀನಿವಾಸ್‌ ವನಗಾ ಮತ್ತು ಕಾಂಗ್ರೆಸ್‌ನಿಂದ ದಾಮು ಶಿಂಗ್ಡಾ ವಡ್ಡಿದ್ದ ತೀವ್ರಸ್ಪರ್ಧೆಯನ್ನು ಎದುರಿಸಿ ರಾಜೇಂದ್ರ ಗೆಲುವಿನ ನಗೆ ಬೀರಿದ್ದಾರೆ.

ADVERTISEMENT

ಮಹಾರಾಷ್ಟ್ರದ ಭಂಡಾರಾ–ಗೋಂದಿಯಾ ಮತ್ತು ನಾಗಾಲ್ಯಾಂಡ್‌ನ ಲೋಕಸಭಾ ಕ್ಷೇತ್ರಗಳ ಮತಗಳ ಎಣಿಕೆ ಜಾರಿಯಲ್ಲಿದೆ. ಭಂಡಾರಾ–ಗೋಂದಿಯಾದಲ್ಲಿ ಎನ್‌ಸಿಪಿಯ ಮಧುಕರ್‌ ಕುಕಡೆ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ನ್ಯಾಷನಲಿಷ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿಯ (ಎನ್‌ಡಿಪಿಪಿ) ಟೊಕೆಹೊ ಮುನ್ನಡೆ ಸಾಧಿಸಿದ್ದಾರೆ.

ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಪಡೆದವರು

ಮಹೇಸ್ತಲಾ (‍ಪಶ್ಚಿಮ ಬಂಗಾಳ)– ಟಿಎಂಸಿ ಪಕ್ಷ : ದುಲಾಲ್‌ ಚಂದ್ರ ದಾಸ್‌

ಗೋಮಿಯಾ (ಜಾರ್ಖಂಡ್‌) – ಜೆಎಂಎಂ : ಬಬಿತಾ ದೇವಿ

ಸಿಲಿ (ಜಾರ್ಖಂಡ್‌ ) – ಜೆಎಂಎಂ : ಸೀಮಾ ದೇವಿ

ಜೋಕಿಹಾತ್‌ (ಬಿಹಾರ) – ಆರ್‌ಜೆಡಿ : ಶಹನವಾಜ್‌

ಅಂಪತಿ (ಮೇಘಾಲಯ) – ಕಾಂಗ್ರೆಸ್‌ : ಮಿಯಾನಿ ಡಿ ಸಿರಾ

ಶಾಹ್‌ಕೋಟ್‌ (ಪಂಜಾಬ್‌) – ಕಾಂಗ್ರೆಸ್‌ : ಹರ್‌ದೇವ್‌ ಸಿಂಗ್‌ ಲಡಿ

ಪಲೂಸ್‌ ಕಡೆಗಾವ್‌ (ಮಹಾರಾಷ್ಟ್ರ) – ಕಾಂಗ್ರೆಸ್‌ : ವಿಶ್ವಜೀತ್‌ ಪತಂಗರಾವ್‌

ಚೆಂಗನ್ನೂರು (ಕೇರಳ) – ಸಿಪಿಎಂ : ಸೆಜಿ ಚೆರಿಯನ್‌

ಥರಾಲಿ (ಉತ್ತರಾಖಂಡ) – ಬಿಜೆಪಿ : ಮುನ್ನಿದೇವಿ ಶಾ

ನೂರ್‌ಪುರ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷ : ನೈಮ್‌ ಉಲ್‌ ಹಸನ್‌ 

ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ಉಪಚುನಾವಣೆ ಇದಾಗಿದೆ. ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಇದೆ. ಹಾಗಾಗಿ ಈ ಚುನಾವಣೆಗಳ ಫಲಿತಾಂಶ ಹೆಚ್ಚಿನ ಕುತೂಹಲ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.