ADVERTISEMENT

ಉಪವಾಸ ಬೂಟಾಟಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಮುಂಬೈ, (ಪಿಟಿಐ): ನರೇಂದ್ರ ಮೋದಿ ಅವರ ಸದ್ಭಾವನಾ ಉಪವಾಸವನ್ನು ಕಟು ಶಬ್ದಗಳಿಂದ ಟೀಕಿಸಿರುವ ಅಖಿಲ ಭಾರತ ಉಲೇಮಾ ಮಂಡಳಿ `ಉಪವಾಸ ಕೇವಲ ಒಂದು ಬೂಟಾಟಿಕೆ, ನಾಟಕ~ ಎಂದು ಜರಿದಿದೆ.
ಇದೊಂದು `ಫೈವ್‌ಸ್ಟಾರ್ ಉಪವಾಸ~ ಎಂದು ಲೇವಡಿ ಮಾಡಿರುವ ಮಂಡಳಿ, ಅದರ ಹಿಂದೆ ಯಾವುದೇ ಸದುದ್ದೇಶ ಇಲ್ಲ ಎಂದು ಶಂಕೆ ವ್ಯಕ್ತಪಡಿಸಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಗುಜರಾತ್ ಮುಸ್ಲಿಮರ ಪರಿಸ್ಥಿತಿ ಒಂದಿನಿತೂ ಸುಧಾರಿಸಿಲ್ಲ. ಅವರು ಇನ್ನೂ ನಿರಾಶ್ರಿತರಂತೆ ಬದುಕುತ್ತಿದ್ದಾರೆ ಎಂದು ಮಂಡಳಿಯ ಬುನೈ ನೊಯಿಮ್ ಹಸನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಮೋದಿ ಜನತೆಯನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದರೆ, ಜನರಿಗೆ ಅವರ ಬಂಡವಾಳ ಏನೆಂಬುದು ಗೊತ್ತು ಎಂದು ಜಮಾತ್- ಎ- ಉಲೇಮಾ ಅಧ್ಯಕ್ಷ ಅಬ್ದುಲ್ ಸಲಾಮ್ ಖಾನ್ ಹೇಳಿದ್ದಾರೆ.

ಮೋದಿ ಅವರಿಗೆ ನಿಜವಾಗಿಯೂ 2002ರ ಕೋಮು ಗಲಭೆಯ ಬಗ್ಗೆ ಪಶ್ಚಾತ್ತಾಪವಾಗಿದ್ದರೆ ಸಂತ್ರಸ್ತರ ಮನೆಗೆ ತೆರಳಿ ಸ್ವಲ್ಪ ಮೊಸಳೆ ಕಣ್ಣೀರು ಸುರಿಸಲಿ ಎಂದು ಅವರು ಕಿಡಿ ಕಾರಿದ್ದಾರೆ.

`ಜಾತ್ಯತೀತತೆ~ ವಿಷ ಕೊಡದಿರಿ- ಠಾಕ್ರೆ
ಮುಂಬೈ, (ಪಿಟಿಐ): ಮೋದಿ ಅವರನ್ನು ಶಿವಸೇನಾ ನಾಯಕ ಬಾಳಾ ಠಾಕ್ರೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೂಗಳ ವೋಟ್ ಬ್ಯಾಂಕ್‌ನಿಂದ ಮುಖ್ಯಮಂತ್ರಿಯಾಗಿರುವ ಮೋದಿ, ದೆಹಲಿಯ ಅಧಿಕಾರದ ಗದ್ದುಗೆ ಹಿಡಿಯಲು ಅದೇ ಹಿಂದೂಗಳಿಗೆ ಜಾತ್ಯತೀತತೆಯ ವಿಷ ಉಣ್ಣಿಸುವ ಕೆಲಸ ಮಾಡುವುದು ಬೇಡ ಎಂದು ಅವರು ಸಲಹೆ ಮಾಡಿದ್ದಾರೆ. ಮಹಾರಾಷ್ಟ್ರದ ನಂತರ ಗುಜರಾತ್ ಹಿಂದುತ್ವದ ಪ್ರಯೋಗಶಾಲೆ ಆದದ್ದನ್ನು ಮರೆಯಬೇಡಿ. ಇಂದು ನೀವು ಏನಾದರೂ ಆಗಿದ್ದರೆ ಅದು ಹಿಂದೂ ವೋಟ್ ಬ್ಯಾಂಕ್ ದೆಸೆಯಿಂದಾಗಿಯೇ ಎಂದು ಶಿವಸೇನೆ ಮುಖವಾಣಿ `ಸಾಮ್ನಾ~ದ ಸಂಪಾದಕೀಯದಲ್ಲಿ ಎಚ್ಚರಿಸಿದ್ದಾರೆ.
 ಠಾಕ್ರೆ ಅವರ ಸಹೋದರನ ಪುತ್ರ ಮತ್ತು ಎಂಎನ್‌ಎಸ್ ಸಂಸ್ಥಾಪಕ ರಾಜ್ ಠಾಕ್ರೆ ಈಚೆಗೆ ಉಪವಾಸ ನಿರತ ಮೋದಿ ಅವರನ್ನು ಭೇಟಿಯಾಗಿದ್ದರು.

 ಈ ಸಂದರ್ಭದಲ್ಲಿ  `ಮೋದಿ ಪ್ರಧಾನಿಯಾದರೆ ಒಳ್ಳೆಯದು~ ಎಂಬ ಹೇಳಿಕೆ ನೀಡಿದ್ದರು. ಆ ಬೆನ್ನಲ್ಲೇ `ಸಾಮ್ನಾ~ದಲ್ಲಿ ಈ ಸಂಪಾದಕೀಯ ಪ್ರಕಟವಾಗಿದೆ.

`ಪ್ರಧಾನಿ ಹುದ್ದೆಗೆ ಬಿಜೆಪಿ ಯಾರನ್ನೂ ಬಿಂಬಿಸಿಲ್ಲ
~ಪಟ್ನಾ, (ಪಿಟಿಐ):
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈವರೆಗೂ ಯಾರನ್ನೂ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬಿಜೆಪಿ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿಯುಗೆ ತಿಳಿಸಬೇಕಾಗುತ್ತದೆ.

ಪ್ರಧಾನಿ ಅಭ್ಯರ್ಥಿ ವಿಷಯದ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.