ADVERTISEMENT

ಉಮ್ಮನ್ ಚಾಂಡಿ ರಾಜೀನಾಮೆಗೆ ಪಟ್ಟು

ಸೌರ ವಿದ್ಯುತ್ ಫಲಕ ಹಗರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ತಿರುವನಂತಪುರ (ಪಿಟಿಐ): ಸೌರ ವಿದ್ಯುತ್ ಫಲಕ ವ್ಯವಹಾರದಲ್ಲಿ ವಂಚನೆ ನಡೆಸಿದವರ ಜತೆ ನಿಕಟ ಸಂಪರ್ಕ ಹೊಂದಿರುವ ಉಮ್ಮನ್ ಚಾಂಡಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷವಾದ ಎಲ್‌ಡಿಎಫ್ ಆಗ್ರಹಪಡಿಸಿದ್ದರಿಂದ ಕೇರಳ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಯಿತು.

ಸರ್ಕಾರದ ವಿರುದ್ಧ ಮಾಡಲಾದ ಎಲ್ಲಾ ಆಪಾದನೆಗಳು ಹುಸಿಯಾದ ನಂತರ ವಿರೋಧ ಪಕ್ಷಗಳು ಈಗ ಮತ್ತೊಂದು ಸುಳ್ಳು ಆಪಾದನೆ ಮಾಡುವ ಮೂಲಕ ತಮ್ಮ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಿವೆ. ಸೌರ ವಿದ್ಯುತ್ ಫಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಎಂದು ಚಾಂಡಿ ಹೇಳಿದರು.

ಆದರೂ ಸಮಾಧಾನಗೊಳ್ಳದ ವಿರೋಧ ಪಕ್ಷದ ಸದಸ್ಯರು ರಾಜೀನಾಮೆಗೆ ಪಟ್ಟು ಹಿಡಿದರಲ್ಲದೆ ವಂಚನೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.ವಿರೋಧ ಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ದಿನದಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.

ತಮ್ಮ ವಿರುದ್ಧ ಮಾಡಲಾದ ಆರೋಪಕ್ಕೆ ವಿವರಣೆ ನೀಡಿದ ಮುಖ್ಯಮಂತ್ರಿ ಚಾಂಡಿ ಅವರು, ಹಲವಾರು ಮಂದಿಗೆ ವಂಚನೆ ಮಾಡಿದ ಸೌರ ವಿದ್ಯುತ್ ಫಲಕ ವಿತರಣೆ ಸಂಸ್ಥೆಯ ಸರಿತಾ ನಾಯರ್ ಮತ್ತು ಬಿಜು ರಾಧಾಕೃಷ್ಣನ್ ಜತೆ ನಿಕಟ ಸಂಪರ್ಕವಿದೆ ಎಂಬುದನ್ನು ಅಲ್ಲಗಳೆದರು.

ಸೌರ ವಿದ್ಯುತ್ ಫಲಕ ವಿತರಣಾ ಸಂಸ್ಥೆ ಮತ್ತು ಗಾಳಿ ಯಂತ್ರ ಕಂಪೆನಿಯಲ್ಲಿ ತಮ್ಮ ಪಾಲುದಾರಿಕೆ ಇದೆ ಎಂಬ ಆಪಾದನೆಯನ್ನೂ ಅವರು ತಳ್ಳಿಹಾಕಿದ್ದಾರೆ.

ADVERTISEMENT

ತಮ್ಮ ಕಚೇರಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶ ನೀಡಿರುವುದನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಮುಖ್ಯಮಂತ್ರಿಗಳು ತಮ್ಮ ಕಚೇರಿಯ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಹಾಗೂ ಎಡಿಜಿಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಚಾಂಡಿ ತಿಳಿಸಿದ್ದಾರೆ.

ಆರೋಪಿ ಬಂಧನ: ಸೌರ ವಿದ್ಯುತ್ ಫಲಕ ಹಗರಣದ ಪ್ರಮುಖ ಆಪಾದಿತ ಬಿಜು ರಾಧಾಕೃಷ್ಣನ್‌ನ್ನು ಪೊಲೀಸರು ಕೊಯಮತ್ತೂರಿನಲ್ಲಿ  ಸೋಮವಾರ ಬಂಧಿಸಿದ್ದಾರೆ. ಇನ್ನೊಬ್ಬ ಆಪಾದಿತೆ ಸರಿತಾ ನಾಯರ್‌ಳನ್ನು ಬಂಧಿಸಿದ ನಂತರ ರಾಧಾಕೃಷ್ಣನ್ ತಲೆಮರೆಸಿಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.