ADVERTISEMENT

ಎಂಜಿನಿಯರಿಂಗ್: 2 ಲಕ್ಷ ಸೀಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 6:50 IST
Last Updated 31 ಡಿಸೆಂಬರ್ 2010, 6:50 IST

ನವದೆಹಲಿ (ಐಎಎನ್‌ಎಸ್): ದೇಶದಾದ್ಯಂತ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಇನ್ನೂ ಎರಡು ಲಕ್ಷ ಸೀಟುಗಳ ಹೆಚ್ಚಿನ ಪ್ರವೇಶಾವಕಾಶಕ್ಕೆ  ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಸುಧಾರಣೆ ನೀತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಗುರುವಾರ ತಿಳಿಸಿದ್ದಾರೆ.

ಮ್ಯಾನೇಜ್‌ಮೆಂಟ್ ಕೋರ್ಸುಗಳಲ್ಲಿಯೂ ಸಹಾ ಇನ್ನೂ 80 ಸಾವಿರ ಹೆಚ್ಚುವರಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಅಂತೆಯೇ ವಾಸ್ತುವಿನ್ಯಾಸ  (ಆರ್ಕಿಟೆಕ್ಚರ್) ಕೋರ್ಸುಗಳಲ್ಲಿ ಮತ್ತೆ 2,200 ಸಾವಿರ ಸೀಟುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಸಿಬಲ್ ವಿವರಿಸಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳಿಗೆ ಅಗತ್ಯವಿರುವ ಭೂಮಿ ಮಿತಿಯ ಕುರಿತಂತೆಯೂ ಸರ್ಕಾರ ತನ್ನ ನೀತಿಯಲ್ಲಿ ಉದಾರ ಧೋರಣೆ ತಳೆಯಲು ಮುಂದಾಗಿದೆ. ಇನ್ನು ಮುಂದೆ ಹೊಸ ಎಂಜಿನಿಯರಿಂಗ್ ಕಾಲೇಜುಗಳಿಗೆ ಈ ಹಿಂದಿನಂತೆ ಹೆಚ್ಚಿನ ಸ್ಥಳ ಅವಶ್ಯಕತೆಯಿರುವುದಿಲ್ಲ ಎಂದು ಸಿಬಲ್ ಇದೇ ವೇಳೆ ಹೇಳಿದ್ದಾರೆ.

ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜಿಗೆ 10 ಎಕರೆ ಭೂಪ್ರದೇಶದ ಅಗತ್ಯವಿರಬೇಕೆಂಬ ನಿಯಮವಿದ್ದರೆ ನಗರ ಪ್ರದೇಶಗಳಲ್ಲಿ ಈ ಮಿತಿ 2.5 ಎಕರೆಗೆ ಸೀಮಿತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.