ADVERTISEMENT

ಎಐಎಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಉಚಿತ ಕೊಡುಗೆ.

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಚೆನ್ನೈ: ಆಡಳಿತಾರೂಢ ಡಿಎಂಕೆ ವಿರುದ್ಧ ಜಯಗಳಿಸುವ ಮೂಲಕ ಈ ಬಾರಿ ಮತ್ತೆ ಗದ್ದುಗೆಗೇರಲು ಪಣ ತೊಟ್ಟಿರುವ ಎಐಎಡಿಎಂಕೆ ಗುರುವಾರ ಬಿಡುಗಡೆ ಮಾಡಿರುವ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸಿದೆ.ಡಿಎಂಕೆಯ ಪ್ರಣಾಳಿಕೆಗೆ ಪ್ರತಿಯಾಗಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ತಂತ್ರ ಅನುಸರಿಸಿರುವ ಎಐಎಡಿಂಕೆ ಮುಖ್ಯಸ್ಥೆ ಜಯಲಲಿತಾ ಭಾರಿ ಪ್ರಮಾಣದಲ್ಲಿ ಉಚಿತ ಸರಕು ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದ್ದಾರೆ.

 

ಶ್ರೀರಂಗಂ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ತಿರುಚಿರಾಪಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಯಲಲಿತಾ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪಕ್ಷ ಅಧಿಕಾರಕ್ಕೆ ಬಂದರೆ ಪಡಿತರ ಚೀಟಿದಾರರಿಗೆ ಒಂದು ರೂ ದರದಲ್ಲಿ ನೀಡಲಾಗುತ್ತಿರುವ ಅಕ್ಕಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಪಡಿತರ ಚೀಟಿದಾರರು ತಿಂಗಳಿಗೆ 20 ಕೆ.ಜಿಯಷ್ಟು ಅಕ್ಕಿಯನ್ನು ಉಚಿತವಾಗಿ ಪಡೆಯಬಹುದು ಎಂದು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.

ಗ್ರೈಂಡರ್ ಅಥವಾ ಮಿಕ್ಸರ್ ಅನ್ನು ಉಚಿತವಾಗಿ ನೀಡುವ ಡಿಎಂಕೆ ಪ್ರಣಾಳಿಕೆಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜಯಲಲಿತಾ ಗ್ರಾಮೀಣ ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಫ್ಯಾನ್, ಮಿಕ್ಸಿ ಮತ್ತು ಗ್ರೈಂಡರ್‌ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿಯೇ ಉಚಿತ ಲ್ಯಾಪ್‌ಟಾಪ್ನೀಡುವುದಾಗಿ ಹೇಳಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಅನುಷ್ಠಾನಕ್ಕೆ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
 

ADVERTISEMENT

ಜಯಾ ಆಸ್ತಿ 51 ಕೋಟಿ
ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ನಾಮಪತ್ರದಲ್ಲಿ ತಾವು 51 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ 24.65 ಕೋಟಿ ರೂ ಆಸ್ತಿ ಹೊಂದಿರುವುದಾಗಿ ಅವರು ತಿಳಿಸಿದ್ದರು.
 

ವಿ.ಎಸ್ ಬಳಿ 3,000 ನಗದು!
ಪಾಲಕ್ಕಾಡ್/ಕೇರಳ (ಪಿಟಿಐ): ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ತಮ್ಮ ಬಳಿ ಯಾವುದೇ ಸ್ಥಿರ ಅಥವಾ ಚರ ಆಸ್ತಿ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ಬಳಿ ಕೇವಲ ಮೂರು ಸಾವಿರ ರೂ ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 80,295 ರೂ ಇರುವುದಾಗಿ ನಮೂದಿಸಿದ್ದಾರೆ.
 

ಗೊಗೋಯ್ ಆಸ್ತಿ 3.65 ಕೋಟಿ
ಗುವಾಹಟಿ (ಪಿಟಿಐ): ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ತಿತಾಬರ್ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ತರುಣ್ ಗೊಗೋಯ್ ತಮ್ಮ ಆಸ್ತಿ ವಿವವರಗಳನ್ನು ಘೋಷಣೆ ಮಾಡಿದ್ದು, ಅವರ ಒಟ್ಟು ಸ್ಥಿರ ಆಸ್ತಿಯ ಮೌಲ್ಯ 3.65 ಕೋಟಿ ರೂ ಮತ್ತು ಚರ ಆಸ್ತಿಯ ಮೌಲ್ಯ 35 ಲಕ್ಷ ರೂ.ಆದಾಯ ತೆರಿಗೆ ಮಾಹಿತಿಯಂತೆ ಅವರ ವಾರ್ಷಿಕ ವರಮಾನ 5,92,580 ರೂ. 19 ಲಕ್ಷ ಸಾಲದ ಹೊರೆ ತಮ್ಮ ಮೇಲಿದ್ದು, 1 ಲಕ್ಷ 68 ಸಾವಿರ ಬಡ್ಡಿ ಬಾಕಿ ಉಳಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ

ತಿರುಚಿರಾಪಳ್ಳಿ (ಪಿಟಿಐ): ಜಯಲಲಿತಾ ಶ್ರೀರಂಗಂ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ವಿಶೇಷ ವಿಮಾನದಲ್ಲಿ ಚೆನ್ನೈನಿಂದ ಆಗಮಿಸಿದ ಜಯಲಲಿತಾ ಅವರಿಗೆ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಪಕ್ಷದ ಇತರ 159 ಅಭ್ಯರ್ಥಿಗಳೂ ಸಹ ಜಯಲಲಿತಾ ಅವರ ಸೂಚನೆಯಂತೆ ಗುರುವಾರ ನಾಮಪತ್ರ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.