ADVERTISEMENT

ಎನ್‌ಐಎ ‘ವಾಂಟೆಡ್‌’ ಪಟ್ಟಿಯಲ್ಲಿ ಪಾಕ್‌ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ನವದೆಹಲಿ: ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಅಮೀರ್‌ ಜುಬೈರ್‌ ಸಿದ್ದಿಕಿ ತಾನು ಹುಡುಕುತ್ತಿರುವ ವ್ಯಕ್ತಿ (ಮೋಸ್ಟ್‌ ವಾಂಟೆಡ್‌) ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಇಸ್ರೇಲ್‌ ಕಾನ್ಸಲೇಟ್‌ನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಇವರ ವಿರುದ್ಧ ಎರಡು ತಿಂಗಳ ಹಿಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ.

‘ಬಾಸ್‌’ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುವ ಈ ವ್ಯಕ್ತಿ ಕೊಲಂಬೊದಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಲ್ಲಿ ವೀಸಾ ಕೌನ್ಸಿಲರ್‌ ಆಗಿ ನಿಯೋಜಿತರಾಗಿದ್ದರು. ಆ ಸಂದರ್ಭದಲ್ಲಿ ಅವರು, ದಕ್ಷಿಣ ಭಾರತದ ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ. ಬೇಹುಗಾರಿಕೆಗೆ ಹಲವು ಜನರನ್ನು ನೇಮಿಸಿದ್ದಾರೆ ಎಂಬ ಆರೋಪ ಅವರ ಮೇಲೆ ಇದೆ.

ಸಿದ್ದಿಕಿಯ ಫೋಟೊಗಳನ್ನು ಎನ್‌ಐಎ ಬಿಡುಗಡೆ ಮಾಡಿದೆ. ಅವರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಇಂಟರ್‌ಪೋಲ್‌ಗೆ (ಅಂತರರಾಷ್ಟ್ರೀಯ ಅಪರಾಧ ಪೊಲೀಸ್‌ ಸಂಘಟನೆ) ಮನವಿ ಮಾಡಲು ಸಿದ್ಧತೆ ನಡೆಸಿದೆ. ಸಿದ್ದಿಕಿಯ ಜತೆಗೆ ಈ ಸಂಚಿನಲ್ಲಿ ಇತರ ಮೂವರು ಪಾಕಿಸ್ತಾನಿಯರು ಕೂಡ ಭಾಗಿಯಾಗಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ.

ADVERTISEMENT

‘ಹುಡುಕುತ್ತಿರುವ ವ್ಯಕ್ತಿ’ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಅಧಿಕಾರಿಯೊಬ್ಬರನ್ನು ಇದೇ ಮೊದಲ ಬಾರಿ ಎನ್‌ಐಎ ಸೇರಿಸಿದೆ.

ಶ್ರೀಲಂಕಾದ ಪೌರ ಮೊಹಮ್ಮದ್‌ ಸಕೀರ್‌ ಹುಸೇನ್‌ನನ್ನು 2014ರಲ್ಲಿ ವಿಚಾರಣೆಗೆ ಒಳಪಡಿಸಿದಾಗ ಸಿದ್ದಿಕಿಯ ಹೆಸರು ಮೊದಲ ಬಾರಿಗೆ ಪ್ರಸ್ತಾಪವಾಗಿತ್ತು. ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಈತ ಜೈಲಿನಲ್ಲಿದ್ದಾನೆ. ಕೆಲವು ಪ್ರಮುಖ ಸ್ಥಾವರಗಳ ಪೋಟೊ ತೆಗೆದು ಅದನ್ನು ಸಿದ್ದಿಕಿಗೆ ಈತ ತಲುಪಿಸಿದ್ದಾನೆ. ಶ್ರೀಲಂಕಾದ ಮೇಲೆ ಭಾರತ ಒತ್ತಡ ಹಾಕಿದ್ದರಿಂದಾಗಿ ಅಲ್ಲಿನ ಸರ್ಕಾರ ಸಿದ್ದಿಕಿಯನ್ನು ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸಿತ್ತು.

ಈ ಫೆಬ್ರುವರಿಯಲ್ಲಿ ಎನ್‌ಐಎ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಅದರಲ್ಲಿ ಸಿದ್ದಿಕಿ ಮತ್ತು ಆತನ ಸಹಚರರಾದ ಬಾಲಸುಬ್ರಮಣಿಯನ್‌ ಮತ್ತು ನೂರುದ್ದೀನ್‌ ಹೆಸರು ಸೇರಿಸಲಾಗಿದೆ.

ಅಮೆರಿಕದ ತನಿಖಾ ಸಂಸ್ಥೆಗಳು ನೀಡಿದ ಕೆಲವು ಡಿಜಿಟಲ್‌ ಸಾಕ್ಷ್ಯಗಳಿಂದಾಗಿ ಸಿದ್ದಿಕಿಯೇ ಪ‍್ರಮುಖ ಸಂಚುಕೋರ ಎಂಬ ಮಾಹಿತಿ ಎನ್‌ಐಎಗೆ ಸಿಕ್ಕಿತ್ತು. ಹುಸೇನ್‌ನ ವಿಚಾರಣೆ ಅದನ್ನು ದೃಢಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.