ADVERTISEMENT

ಎನ್‌ಸಿಇಆರ್‌ಟಿ ಪಠ್ಯದಲ್ಲಿ ಕ್ಯುಆರ್‌ ಕೋಡ್

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ಮಾಹಿತಿ

ಪಿಟಿಐ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಎನ್‌ಸಿಇಆರ್‌ಟಿ ಪಠ್ಯದಲ್ಲಿ ಕ್ಯುಆರ್‌ ಕೋಡ್
ಎನ್‌ಸಿಇಆರ್‌ಟಿ ಪಠ್ಯದಲ್ಲಿ ಕ್ಯುಆರ್‌ ಕೋಡ್   

ನವದೆಹಲಿ: ‘ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 2019–20ನೇ ಸಾಲಿನಿಂದ ಪ್ರಕಟಿಸುವ ಪಠ್ಯಪುಸ್ತಕಗಳಲ್ಲಿ ಕ್ಯುಆರ್ ಕೋಡ್‌ಗಳು ಇರಲಿವೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ತಿಳಿಸಿದ್ದಾರೆ.

‘ಶೈಕ್ಷಣಿಕ ಜಾಲತಾಣಗಳೊಂದಿಗೆ ಲಿಂಕ್ ಹೊಂದಿರುವ ಈ ಕ್ಯುಆರ್ ಕೋಡ್‌ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಆಯಾ ಪಠ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಪಠ್ಯಗಳಿಗೆ ಸಂಬಂಧಿಸಿದ ಕಿರುಚಿತ್ರಗಳು, ಅನಿಮೇಷನ್ ಚಿತ್ರಗಳು ಮತ್ತು ಇನ್ಫೊಗ್ರಾಫಿಕ್‌ಗಳನ್ನು ಈ ಶೈಕ್ಷಣಿಕ ಜಾಲತಾಣಗಳು ಹೊಂದಿರಲಿವೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ಇವನ್ನು ವೀಕ್ಷಿಸಬಹುದು ಮತ್ತು ಶಾಲೆಯಲ್ಲಿ ಡಿಜಿಟಲ್ ಬೋರ್ಡ್‌ಗಳಲ್ಲೂ ಇವನ್ನು ಪ್ರದರ್ಶಿಸಬಹುದು’ ಎಂದು ಅವರು ವಿವರಿಸಿದ್ದಾರೆ.

‘ದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇರುವ ಕಪ್ಪುಹಲಗೆಗಳನ್ನು ತೆರವು ಮಾಡಿ, ಅವುಗಳ ಬದಲಿಗೆ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಸಂಬಂಧ ತಜ್ಞರ ಸಮಿತಿಯೊಂದು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ವರದಿ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈಗಾಗಲೇ ಜಾರಿಯಲ್ಲಿರುವ ಸಾರ್ವತ್ರಿಕ ಶಿಕ್ಷಣ ಕಾರ್ಯಕ್ರಮಗಳನ್ನು ಸಂಯೋಜಿಸಿ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಿರ್ಧರಿಸಲಾಗಿದೆ. ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಯೋಜನೆಗಳನ್ನು ವಿಲೀನಗೊಳಿಸಿ ಒಂದೇ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಇದಕ್ಕಾಗಿ ₹ 75,000 ಕೋಟಿ ಮೀಸಲಿರಿಸಲಾಗುತ್ತದೆ. ಪ್ರಸ್ತುತ ಮೀಸಲಿರಿಸಿರುವ ಅನುದಾನಕ್ಕಿಂತ ಇದು ಶೇ 20ರಷ್ಟು ಹೆಚ್ಚು ಎಂದು ಅವರು ಹೇಳಿದ್ದಾರೆ.

ಬಡ್ಡಿಗೆ ವಿನಾಯಿತಿ: ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ನ ಅವಧಿ ಮತ್ತು ನಂತರದ ಒಂದು ವರ್ಷದ ಅವಧಿಯವರೆಗೆ ಸಾಲದ ಮೇಲಿನ ಬಡ್ಡಿ ಪಾವತಿಸಬೇಕಿಲ್ಲ. 2017–18ನೇ ಸಾಲಿನಿಂದ 2019–20ನೇ ಸಾಲಿನವರೆಗೆ, ಮೂರು ಶೈಕ್ಷಣಿಕ ವರ್ಷಗಳಲ್ಲಿ ಈ ಯೋಜನೆ ಅಡಿ ಬಡ್ಡಿ ಪಾವತಿಸಲೆಂದೇ ₹6,600 ಕೋಟಿ ತೆಗೆದಿರಿಸಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ₹2,200 ಕೋಟಿ ವೆಚ್ಚ ಮಾಡಲಾಗುತ್ತದೆ. ಮೂರು ಶೈಕ್ಷಣಿಕ ವರ್ಷಗಳಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಸಚಿವ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.