ನವದೆಹಲಿ (ಪಿಟಿಐ): ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ಸರ್ಕಾರಿ ಸ್ವಾಮ್ಯದ ಟ್ರೇಡಿಂಗ್ ಸಂಸ್ಥೆ ‘ಪಿಇಎಸ್’ನ ಹೂಡಿಕೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ದೇಶದಾದ್ಯಂತ 15 ಕಡೆ ಶೋಧ ನಡೆಸಿದೆ.
ಈ ಅವ್ಯವಹಾರದಿಂದ ಕೇಂದ್ರದ ಬೊಕ್ಕಸಕ್ಕೆ ₨ 120 ಕೋಟಿ ನಷ್ಟ ಆಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಅಪರಾಧ ಸಂಚು, ನಕಲಿ ದಾಖಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನಲ್ಲಿ ನಾಲ್ಕು, ಹರಿಯಾಣದ ಕರ್ನಲ್‌ನಲ್ಲಿ ಎರಡು ಹಾಗೂ ದೆಹಲಿಯ ಒಂಬತ್ತು ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದೆ.
ಹೂಡಿಕೆದಾರರಿಗೆ ವಂಚನೆ: ಹಲವು ಬಗೆಯ ಸರಕುಗಳಿಗೆ ಸಂಬಂಧಿಸಿ ವಾಯಿದಾ ವಹಿವಾಟನ್ನು ವಿದ್ಯುನ್ಮಾನ ಸ್ವರೂಪದ ಪದ್ಧತಿಯಲ್ಲಿ ನಡೆಸುವ ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್, ಸಾಮಾನ್ಯರೂ ಸೇರಿದಂತೆ ಒಟ್ಟು 13 ಸಾವಿರ ಹೂಡಿಕೆದಾರರಿಗೆ ₨ 5,600 ಕೋಟಿ ವಂಚಿಸಿದ ಆರೋಪಕ್ಕೆ ಗುರಿಯಾಗಿದೆ. ಇದೇ ಕಾರಣಕ್ಕೆ, ಧಾನ್ಯ, ಬೆಳೆ, ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಅಮೂಲ್ಯ ಲೋಹಗಳ ಇ-–ಟ್ರೇಡಿಂಗ್ ನಡೆಸುವ ಸಂಸ್ಥೆಯ ವಹಿವಾಟನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಜುಲೈನಲ್ಲಿಯೇ ಸ್ಥಗಿತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.