ADVERTISEMENT

ಎನ್‌ಡಿಎ, ಎಡಪಕ್ಷದಲ್ಲಿ ಒಡಕು

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ಎನ್‌ಡಿಎ, ಎಡಪಕ್ಷದಲ್ಲಿ ಒಡಕು
ಎನ್‌ಡಿಎ, ಎಡಪಕ್ಷದಲ್ಲಿ ಒಡಕು   

ನವದೆಹಲಿ (ಪಿಟಿಐ/ಐಎಎನ್‌ಎಸ್): ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂಬ ವಿಷಯದಲ್ಲಿ ಎನ್‌ಡಿಎ ಮತ್ತು ಎಡಪಕ್ಷಗಳಲ್ಲಿ ಒಡಕು ಉಂಟಾಗಿದ್ದು, ಗುರುವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸಂಗ್ಮಾ ಪರ ನಿಂತರೆ, ಜೆಡಿಯು ಪ್ರಣವ್ ಮುಖರ್ಜಿ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ.
ಕೇವಲ ಒಂದೇ ಗಂಟೆಯ ಅಂತರದಲ್ಲಿ ಎರಡೂ ಪಕ್ಷಗಳು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರ ಘೋಷಿಸಿದವು.

ಇತ್ತ ಎಡ ಪಕ್ಷಗಳಲ್ಲೂ ಇದೇ ವಿಷಯವಾಗಿ ಭಿನ್ನಮತ ಕಾಣಿಸಿಕೊಂಡಿದ್ದು, ಸಿಪಿಎಂ ಮತ್ತು ಫಾರ್ವರ್ಡ್ ಬ್ಲಾಕ್ ಯುಪಿಎ ಅಭ್ಯರ್ಥಿಗೆ ಬೆಂಬಲಿಸಲು ನಿರ್ಧರಿಸಿದರೆ, ಸಿಪಿಐ ಹಾಗೂ ಆರ್‌ಎಸ್‌ಪಿ ಮತದಾನದಿಂದ ದೂರ ಉಳಿಯಲು ನಿರ್ಧರಿಸಿವೆ. 


ಎನ್‌ಡಿಎ ಮೈತ್ರಿಕೂಟದ ಜೆಡಿಯು, ಶಿವಸೇನೆ ಮತ್ತು ಕೆಲವು ಎಡಪಕ್ಷಗಳು ಯುಪಿಎ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಕಾರಣ ಪ್ರಣವ್ ಮುಖರ್ಜಿ ಅವರ ರಾಷ್ಟ್ರಪತಿ ಭವನ ಪ್ರವೇಶದ ಹಾದಿ ಸುಗಮವಾದಂತೆ ತೋರುತ್ತಿದೆ.

ಮತಗಳ ಲೆಕ್ಕಾಚಾರ: ಈಗಿನ ಬೆಳವಣಿಗೆಯಿಂದಾಗಿ ಒಟ್ಟು 11 ಲಕ್ಷ ಮತಗಳ ಪೈಕಿ ಪ್ರಣವ್ ಅವರಿಗೆ ಕನಿಷ್ಠ 6.29 ಲಕ್ಷ ಮತಗಳು ಬರುವುದು ಖಚಿತವಾಗಿದೆ. ಚುನಾವಣೆಯಲ್ಲಿ ಗೆಲ್ಲಲು 5,49,442 ಮತಗಳು ಸಾಕು.
 
ಬಿಜೆಪಿ ಮತ್ತು ಮಿತ್ರಪಕ್ಷಗಳ ಬೆಂಬಲ ಪಡೆದಿರುವ ಸಂಗ್ಮಾ ಅವರು 3.10 ಲಕ್ಷ ಮತಗಳನ್ನು ಮಾತ್ರ ಗಳಿಸುವುದು ಸಾಧ್ಯ. ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಗುಪ್ತ ಮತದಾನ ನಡೆಯುವುದರಿಂದ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಹಾಗೇನಾದರೂ ನಡೆದಲ್ಲಿ ಫಲಿತಾಂಶದಲ್ಲಿ ಏರುಪೇರು ಆಗಬಹುದು.

ಎನ್‌ಸಿಪಿ ಟೀಕೆ: ಸಂಗ್ಮಾ ಅವರಿಗೆ ಬಿಜೆಪಿ ಬೆಂಬಲ ನಿರ್ಧಾರ ಹೊರಬೀಳುತ್ತಿದ್ದಂತೆಯೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎನ್‌ಸಿಪಿ, ಸಂಗ್ಮಾ ಈಗ ಕೋಮುವಾದಿ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಆರೋಪಿಸಿದೆ.

`ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳಿಲ್ಲದೆ ಯುಪಿಎದಿಂದ ಆಮದು ಮಾಡಿಕೊಂಡ ವ್ಯಕ್ತಿಗೆ ಬೆಂಬಲ ನೀಡುವ ಶೋಚನೀಯ ಹಾಗೂ ದಿವಾಳಿ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ~ ಎಂದು ಪಕ್ಷದ ವಕ್ತಾರ ಡಿ.ಪಿ. ತ್ರಿಪಾಠಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT