ADVERTISEMENT

ಎನ್‌ಸಿಟಿಸಿ: ಮೂಡದ ಒಮ್ಮತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ: `ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಂಸ್ಥೆ~ (ಎನ್‌ಸಿಟಿಸಿ) ಸ್ಥಾಪನೆ ಪ್ರಸ್ತಾವಕ್ಕೆ ಕಾಂಗ್ರೆಸ್ಸೇತರ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಬೆಂಬಲ ಸೂಚಿಸಿವೆ. ಇದರಿಂದಾಗಿ ಎನ್‌ಸಿಟಿಸಿ ವಿಷಯದಲ್ಲಿ ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎನ್‌ಸಿಟಿಸಿ ರಾಜ್ಯ ಪೊಲೀಸರ ಮೇಲೆ ಅನಿಯಂತ್ರಿತ ಅಧಿಕಾರ ಹೊಂದಲಿದೆ ಎಂಬ ಕಾರಣಕ್ಕೆ ಕರ್ನಾಟಕ, ತಮಿಳುನಾಡು, ಒಡಿಶಾ, ಛತ್ತೀಸ್‌ಗಡ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಕಾಂಗ್ರೆಸ್ಸೇತರ ರಾಜ್ಯಗಳು ವಿರೋಧ ಮಾಡಿವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು  ಬೆಂಬಲ ವ್ಯಕ್ತಪಡಿಸಿವೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‌ಸಿಟಿಸಿ ಜಾರಿಗೆ ತಡೆ ನೀಡಿದೆ. ಈ ಕುರಿತು ರಾಜ್ಯಗಳ ಜತೆ ಚರ್ಚಿಸುತ್ತಿದೆ. ಈ ಸಂಸ್ಥೆ ನಿಯಂತ್ರಣ ವಿಧಾನ ಕುರಿತು ಕಾಂಗ್ರೆಸ್ಸೇತರ ಸರ್ಕಾರ ಪ್ರತಿನಿಧಿಸುವ ಅಧಿಕಾರಿಗಳು ತಮ್ಮ ವಿರೋಧ ದಾಖಲಿಸಿದರು. ಇದು ಸ್ವೀಕಾರಕ್ಕೆ ಅರ್ಹವಲ್ಲ ಎಂದು ಪ್ರತಿಪಾದಿಸಿದರು. ಗುಪ್ತದಳ ಈಗಾಗಲೇ ಈ ಕೆಲಸ ಮಾಡುತ್ತಿರುವುದರಿಂದ ಉದ್ದೇಶಿತ ಎನ್‌ಸಿಟಿಸಿಗೆ ಬಂಧನದ ಅಧಿಕಾರ ಕೊಡುವ ಅಗತ್ಯವಿಲ್ಲ ಎಂದರು.

ADVERTISEMENT

`ನಿಮ್ಮ ಆಕ್ಷೇಪ ಮತ್ತು ಆತಂಕಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು. ಇವುಗಳ ನಿವಾರಣೆಗೆ ಪ್ರಯತ್ನ ನಡೆಸಲಾಗುವುದು~ ಎಂದು ಸಿಂಗ್ ಕಾಂಗ್ರೆಸ್ಸೇತರ ರಾಜ್ಯಗಳಿಗೆ ಭರವಸೆ ನೀಡಿದರು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ ಎಂಬ ಕಾರಣಕ್ಕೆ ಸುಮಾರು 12ರಾಜ್ಯಗಳ ಮುಖ್ಯಮಂತ್ರಿಗಳು ಎನ್‌ಸಿಟಿಸಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ಕೂಡಲೇ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ಅವರನ್ನು ಆಗ್ರಹಿಸಿದ್ದಾರೆ.

ಮನಮೋಹನ್‌ಸಿಂಗ್ ಅವರಿಗೆ ಪಟ್ನಾಯಕ್ ಬರೆದಿರುವ ಪತ್ರದಲ್ಲಿ, ಎನ್‌ಸಿಟಿಸಿ ಈಗಿನ ಸ್ವರೂಪದಲ್ಲೇ ಅಂಗೀಕಾರ ಪಡೆದರೆ ರಾಜ್ಯಗಳ ಅಧಿಕಾರ ಮೊಟಕುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತಕ್ಷಣ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಗೃಹ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಬದಲು ಪ್ರಧಾನಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ರಾಷ್ಟ್ರದ ಭದ್ರತೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸ ಎಂದಿದ್ದಾರೆ.

ಜಯಲಲಿತಾ ಮತ್ತು ನಿತೀಶ್‌ಕುಮಾರ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಗೃಹ ಸಚಿವ ಪಿ.ಚಿದಂಬರಂ, `ನಿಮ್ಮಂದಿಗೆ ಚರ್ಚಿಸಿದ ಬಳಿಕವೇ ಈ ವಿಷಯದಲ್ಲಿ ಮುಂದುವರೆಯಲಾಗುವುದು~ ಎಂಬ ಭರವಸೆ ನೀಡಿದ್ದಾರೆ.

ಎನ್‌ಸಿಟಿಸಿಗೆ ಅಕ್ರಮ ಚಟುವಟಿಕೆ ತಡೆ ಕಾಯ್ದೆ 43 (ಎ) ಸೇರ್ಪಡೆ ಮಾಡುವುದರಿಂದ ರಾಜ್ಯಗಳ ಅಧಿಕಾರ ಮೊಟಕಾಗುವುದಿಲ್ಲ. ಬದಲಿಗೆ ಪೊಲೀಸ್ ಅಧಿಕಾರಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸುವ ಮತ್ತು ಶೋಧಿಸುವ ಅಧಿಕಾರ ನೀಡಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.