ADVERTISEMENT

ಎಫ್‌ಐಆರ್‌ಗೆ ಅಣ್ಣಾ ಆಗ್ರಹ; ಆಗಸ್ಟ್‌ವರೆಗೆ ಗಡುವು- ಜೈಲ್ ಭರೊ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST
ಎಫ್‌ಐಆರ್‌ಗೆ ಅಣ್ಣಾ ಆಗ್ರಹ; ಆಗಸ್ಟ್‌ವರೆಗೆ ಗಡುವು- ಜೈಲ್ ಭರೊ ಎಚ್ಚರಿಕೆ
ಎಫ್‌ಐಆರ್‌ಗೆ ಅಣ್ಣಾ ಆಗ್ರಹ; ಆಗಸ್ಟ್‌ವರೆಗೆ ಗಡುವು- ಜೈಲ್ ಭರೊ ಎಚ್ಚರಿಕೆ   

ನವದೆಹಲಿ (ಪಿಟಿಐ): ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 14 ಸಂಪುಟ ದರ್ಜೆ ಸಚಿವರ ವಿರುದ್ಧ ಬರುವ ಆಗಸ್ಟ್ ತಿಂಗಳೊಳಗೆ ಎಫ್‌ಐಆರ್ ದಾಖಲಿಸಬೇಕು, ಇಲ್ಲದಿದ್ದಲ್ಲಿ ಜೈಲ್ ಭರೊ ಚಳವಳಿ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಇಲ್ಲಿ ಎಚ್ಚರಿಕೆ ನೀಡಿದರು.

ಅಕ್ರಮ ಬಯಲಿಗೆಳೆಯುವವರ ರಕ್ಷಣೆಗಾಗಿ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಕೈಗೊಂಡಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಅಣ್ಣಾ ಭ್ರಷ್ಟಾಚಾರ ವಿರುದ್ಧದ ತಮ್ಮ ನೂತನ ಕಾರ್ಯಕ್ರಮವನ್ನು ಘೋಷಿಸಿದರು. `ನಾವು ಜೈಲ್ ಭರೊ ಚಳವಳಿಗೆ ಸಿದ್ಧ. ಇದರ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುತ್ತದೆ~ ಎಂದು ಹೇಳಿದರು.

ಕೇಂದ್ರ ಸಚಿವರುಗಳಾದ ಶರದ್ ಪವಾರ್, ಎಸ್.ಎಂ.ಕೃಷ್ಣ, ಪಿ.ಚಿದಂಬರಂ, ಪ್ರಫುಲ್ ಪಟೇಲ್, ಕಪಿಲ್ ಸಿಬಲ್, ಕಮಲ್‌ನಾಥ್, ಅಜಿತ್ ಸಿಂಗ್, ಫಾರೂಕ್ ಅಬ್ದುಲ್ಲ, ಶ್ರೀಪ್ರಕಾಶ್ ಜೈಸ್ವಾಲ್, ಸುಶೀಲ್‌ಕುಮಾರ್ ಶಿಂಧೆ, ಎಂ.ಕೆ.ಅಳಗಿರಿ, ಜಿ.ಕೆ.ವಾಸನ್ ಸೇರಿದಂತೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ 25 ರಾಜಕೀಯ ಮುಖಂಡರ ಹೆಸರನ್ನು ಅಣ್ಣಾ ತಂಡದ ಅರವಿಂದ ಕೇಜ್ರಿವಾಲ್ ಇದೇ ವೇಳೆಪ್ರಸ್ತಾಪಿಸಿದರು.

`ಲೋಕಪಾಲ್ ಮಸೂದೆಯ ಶಕ್ತಿ ಏನು ಎಂಬುದನ್ನು ನಾವು ತೋರಿಸುತ್ತೇವೆ. ನಾನೊಬ್ಬ ಸಂತ. ನನ್ನಂಥ ಸಂತರು ಅದೆಷ್ಟು ಸಮರ್ಥರು ಎನ್ನುವುದನ್ನೂ ನಾನು ತೋರಿಸುವೆ~ ಎಂದು ಅಣ್ಣಾ ಗುಡುಗಿದರು.

ಉಪವಾಸ ಸತ್ಯಾಗ್ರಹದ ಕೊನೆಯಲ್ಲಿ ಅಣ್ಣಾ, ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಶಾಂತಿ ಭೂಷಣ್ ಸರಣಿ ಭಾಷಗಳನ್ನು ಮಾಡುವ ಮೂಲಕ ತಂಡದ ಹೊಸ ಕಾರ್ಯಕ್ರಮವನ್ನು ಬಿಚ್ಚಿಟ್ಟರು.

ಅಣ್ಣಾ ಮತ್ತವರ ತಂಡವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೂ ಪ್ರತಿಪಕ್ಷದ ಮೇಲೆ ಅವರು ಮೃದು ಧೋರಣೆ ತಾಳಿದಂತೆ ಕಂಡುಬಂತು. ಕೇಜ್ರಿವಾಲ್ ಅವರು ತಮ್ಮ ಭಾಷಣದಲ್ಲಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಪ್ರಕರಣಗಳನ್ನು ಪ್ರಸ್ತಾಪಿಸಿದರು. ಗುಜರಾತ್‌ನಲ್ಲಿ ಅಕ್ರಮವನ್ನು ಬಯಲಿಗೆಳೆದ ಅಧಿಕಾರಿಯ ಹತ್ಯೆ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರೂ ಪ್ರಸ್ತಾಪವಾಯಿತು.

ಕಿರುಚಿತ್ರ ಪ್ರದರ್ಶನ: ಸತ್ಯಾಗ್ರಹ ಆರಂಭಕ್ಕೂ ಮುನ್ನ, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮಡಿದವರ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು. ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಕಲ್ಲು ಗಣಿ ಮಾಫಿಯಾದಿಂದ ಹತ್ಯೆಗೀಡಾದ ಯುವ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ತಂದೆ ಅಣ್ಣಾ ಅವರನ್ನು ಬೆಂಬಲಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಲೋಕಪಾಲ್ ಜಾರಿ- ಕೇಂದ್ರ ಬದ್ಧ: `ಪ್ರಬಲ ಲೋಕಪಾಲ್ ಮಸೂದೆ ಜಾರಿಗೆ ತರುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ, ಯಾವ ಬಗೆಯ ಕಾನೂನು ಮಾಡಬೇಕು ಎಂಬುದನ್ನು ಅಂತಿಮವಾಗಿ ದೇಶದ ಸಂಸತ್ತು ತೀರ್ಮಾನಿಸುತ್ತದೆ~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

ಅಣ್ಣಾ ತಂಡದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜನರ ದೃಷ್ಟಿಕೋನ ಭಿನ್ನವಾಗಿದೆ ಎಂದು ಹೇಳಿದರು.

`ರಾಜಕೀಯ ಬೆಂಬಲ~
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಗಣಿ ಮಾಫಿಯಾ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ ಕಾರ್ಯ ನಿರ್ವಹಿಸಲು ಅಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

`ದೇಶದಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಗಣಿ ಮಾಫಿಯಾಕ್ಕೆ ಯಾರು ಸಹಾಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಕೈಗೊಂಡ ಸಂದರ್ಭದಲ್ಲಿ ಮಾಹಿತಿ ಪಡೆದಿದ್ದೆ. ರಾಜಕೀಯ ಬೆಂಬಲವಿಲ್ಲದೇ ಮಾಫಿಯಾ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ~ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.