ADVERTISEMENT

ಎಫ್‌ಡಿಐಗೆ ಪ್ರತಿಪಕ್ಷಗಳ ಪ್ರಬಲ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 9:36 IST
Last Updated 7 ಡಿಸೆಂಬರ್ 2012, 9:36 IST

ನವದೆಹಲಿ (ಪಿಟಿಐ): ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಂಡವಾಳಶಾಹಿ ಧೋರಣೆಯಾಗಿದ್ದು,ಅದು ರೈತರು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಎನ್‌ಡಿಎ ಮತ್ತು ಯುಪಿಎ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದವು.

ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿರೋಧಿಸಿ , ಪ್ರಶ್ನೋತ್ತರ ವೇಳೆಯಲ್ಲಿ  ಎಫ್‌ಡಿಐ ಕುರಿತು ಚರ್ಚೆ ನಡೆಸುವಂತೆ ಅಣ್ಣಾಡಿಎಂಕೆ ಪಕ್ಷದ ವಿ. ಮೈತ್ರೇಯನ್ ಗೊತ್ತುವಳಿ ಮಂಡಿಸಿದರು. ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿ  ಅವರು, ಇದನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ಪ್ರಶ್ನೋತ್ತರ ವೇಳೆಯನ್ನು ಹೊರತುಪಡಿಸಿ ಎಫ್‌ಡಿಐ ಬಗ್ಗೆ ಚರ್ಚೆ ನಡೆಸುವಂತೆ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದರು.

ಇದೇ ವೇಳೆ ಸರ್ಕಾರದ ಕೆಲವು ಉನ್ನತ ಆರ್ಥಿಕ ತಜ್ಙರು ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಜತೆ ಸಂಬಂಧ ಹೊಂದಿದ್ದು, ವಿದೇಶಿ ಬಂಡವಾಳ ಹೂಡಿಕೆಯ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಐಎಂಎಫ್, ವಿಶ್ವ ಬ್ಯಾಂಕ್, ಡಬ್ಲ್ಯೂಟಿಒ, ಎಡಿಬಿ ವಿಶ್ವದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದ್ದು ಆ ನೀತಿಗಳು ದೇಶದ ಭವಿಷ್ಯದ ಮೆಲೆ ಪರಿಣಾಮ ಬೀರಲಿದೆ ಎಂದು ತಿವಾರಿ ತಿಳಿಸಿದರು.

ADVERTISEMENT

ಎಫ್‌ಡಿಐ ಕುರಿತಾಗಿ ವಾಣಿಜ್ಯ ಸಚಿವ ಆನಂದ ಶರ್ಮಾ ಅವರು ಸದನ ಮತ್ತು ದೇಶದ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಟಿಎಂಸಿ ಸದಸ್ಯ ಶೇಖರ್ ರಾಯ್ ಗಂಭೀರ ಆರೋಪ ಮಾಡಿದರು. ಅಲ್ಲದೆ, ಎಫ್‌ಡಿಐ ಕೇವಲ 53 ನಗರಗಳಲ್ಲಿ ಪ್ರಾರಂಭವಾದರೂ ಕ್ರಮೇಣ ಎಲ್ಲೆಡೆ ವ್ಯಾಪಿಸಿ ದೇಶದ ವ್ಯಾಪಾರಸ್ಥರನ್ನು ನಾಶಮಾಡುತ್ತದೆ ಎಂದು ರಾಯ್ ಅಭಿಪ್ರಾಯ ವ್ಯಕ್ತಪಡಿಸಿದರು.

`ವಿದೇಶಿ ಬಂಡವಾಳವನ್ನು ನಿರ್ಲಕ್ಷಿಸಲಾಗದು. ಬಹುಬ್ರಾಂಡ್ ವ್ಯಾಪಾರದ ಅಗತ್ಯವೂ ಇದೆ. ಆದರೆ ದೇಶದ ಹಿತಾಸಕ್ತಿಯನ್ನು ಗಮನದಲಿಟ್ಟುಕೊಂಡು ಹೇಗೆ ಎಫ್‌ಡಿಐ ಯನ್ನು ಜಾರಿಗೆ ತರಬೇಕು ಎಂಬುದನ್ನು ನಿರ್ಧರಿಸಬೇಕಿದೆ' ಎಂದು ಬಿಜೆಪಿ ಸದಸ್ಯ ಶಾಂತಕುಮಾರ್ ಹೇಳಿದರು.

ಆದರೆ  ರಾಮ್ ವಿಲಾಸ್ ಪಾಸ್ವಾನ್ ಅವರು ಎಫ್‌ಡಿಐ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ದೇಶದ ಬಡ ಜನರಿಗೆ ಎಫ್‌ಡಿಐ ಸಹಾಯಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.