ADVERTISEMENT

ಎಫ್‌ಡಿಐ ಮತ್ತಷ್ಟು ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST
ಎಫ್‌ಡಿಐ ಮತ್ತಷ್ಟು ಬಿಕ್ಕಟ್ಟು
ಎಫ್‌ಡಿಐ ಮತ್ತಷ್ಟು ಬಿಕ್ಕಟ್ಟು   

ನವದೆಹಲಿ (ಪಿಟಿಐ/ಐಎಎನ್ಎಸ್): `ಆರ್ಥಿಕ ಸುಧಾರಣೆ ನೆಪದಲ್ಲಿ ದೇಶವನ್ನೇ ಮಾರಾಟ ಮಾಡಲು ಹೊರಟಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಮುಂದಿನ ಸಂಸತ್ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಾಧ್ಯತೆಗಳಿವೆ~ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಇಲ್ಲಿ ಬೆದರಿಕೆ ಹಾಕಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪಕ್ಷವು ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಮಂಡಿಸುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಸೂಚಿಸುವಂತೆ ವಿವಿಧ ರಾಜಕೀಯ ಪಕ್ಷಗಳಿಗೆ  ಮನವಿ ಮಾಡಿದರು.

ಯುಪಿಎ ಅಧಿಕಾರ  ಕೊನೆಗಾಣಿಸುವ ಅವಿಶ್ವಾಸ ಗೊತ್ತುವಳಿ ಮಂಡನೆಗಾಗಿ ಉಳಿದ ರಾಜಕೀಯ ಪಕ್ಷಗಳ ಜೊತೆ ಸಹಕರಿಸಲು ಸಿದ್ಧ ಎಂದೂ ಅವರು  ಘೋಷಿಸಿದರು. 

`ಅವಧಿಗೂ ಮುನ್ನವೇ (ಬಹುತೇಕ ಮುಂದಿನ ಮಾರ್ಚ್ ವೇಳೆಗೆ) ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈ ಕೆಟ್ಟ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದು ನಮಗೂ ಬೇಕಾಗಿಲ್ಲ. ಹೀಗಾಗಿಯೇ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ತಮ್ಮ ಪಕ್ಷ ಸಜ್ಜಾಗಿದೆ~ ಎಂದರು.

ದೇಶ ಮಾರಾಟ; ಆರ್ಥಿಕ ಸುಧಾರಣೆಯಲ್ಲ: `ಆರ್ಥಿಕ ಸುಧಾರಣೆ ನೆಪದಲ್ಲಿ ಸರ್ಕಾರ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ. ದೇಶವನ್ನು ಮಾರಾಟ ಮಾಡುವುದನ್ನೇ ಆರ್ಥಿಕ ಸುಧಾರಣೆ ಎಂದು ಯುಪಿಎ ಭಾವಿಸಿದಂತಿದೆ~ ದೀದಿ ಕಟಕಿಯಾಡಿದರು.

ಸರ್ಕಾರ ಸಂಕಷ್ಟಕ್ಕೆ: ಎಫ್‌ಡಿಐ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಈಗಾಗಲೇ ಯುಪಿಎ ಮೈತ್ರಿ ಕಡಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಡಿಎಂಕೆ ಕೂಡ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯ ಮಾಡಿರುವುದರಿಂದ ಕೇಂದ್ರ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಕರುಣಾನಿಧಿ ಪುತ್ರರಾದ ಎಂ.ಕೆ. ಅಳಗಿರಿ, ಎಂ.ಕೆ. ಸ್ಟಾಲಿನ್ ಭಾಗವಹಿಸಿದ್ದರು.

ಜೆವಿಎಂ-ಪಿ ಬೆಂಬಲ ವಾಪಸ್: ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ   ಜಾರ್ಖಂಡ್ ವಿಕಾಸ್ ಮೋರ್ಚಾ -ಪ್ರಜಾತಾಂತ್ರಿಕ (ಜೆವಿಎಂ-ಪಿ) ಪಕ್ಷವು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ  ವಾಪಸ್ ಪಡೆದಿದೆ.  ಲೋಕಸಭೆಯಲ್ಲಿ ಪಕ್ಷವು ಇಬ್ಬರು ಸದಸ್ಯರನ್ನು ಹೊಂದಿದೆ.

`ಶೀಘ್ರವೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಬೆಂಬಲ ವಾಪಸ್ ಪಡೆಯುತ್ತಿರುವ ಪತ್ರ ಸಲ್ಲಿಸುತ್ತೇವೆ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಯಾದವ್ ಮತ್ತು ಸಂಸದ ಅಜಯ್ ಕುಮಾರ್ ಅವರು ರಾಂಚಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.

ಎನ್‌ಡಿಎ ಜತೆ ಮೈತ್ರಿ ಇಲ್ಲ:  `ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಎಡಪಕ್ಷಗಳ ಜತೆ ಮೈತ್ರಿಗೆ ಮುಂದಾಗುವುದಿಲ್ಲ~ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಅವರು ಕೋಲ್ಕತ್ತದಲ್ಲಿ ತಿಳಿಸಿದ್ದಾರೆ.

`ಒಂದು ವೇಳೆ ಕಾಂಗ್ರೆಸ್ ಪಕ್ಷವು ಎಫ್‌ಡಿಐ ನಿರ್ಧಾರ ಕೈಬಿಟ್ಟಲ್ಲಿ ಹಾಗೂ ಇಂಧನ ಬೆಲೆ ವಾಪಸ್ ಪಡೆದಲ್ಲಿ ಅದರ ಜತೆ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇದೆ~ ಎಂದೂ ಅವರು ಹೇಳಿದ್ದಾರೆ.

ಪುನರ್ ಪರಿಶೀಲನೆಗೆ ಆಗ್ರಹ
ಎಫ್‌ಡಿಐ ವಿಷಯದಲ್ಲಿ ಕೇಂದ್ರವು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿರುವ ಯುಪಿಎ ಮಿತ್ರಪಕ್ಷ ಡಿಎಂಕೆ, ಒಂದು ವೇಳೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಈ ಬಗ್ಗೆ ನಿರ್ಣಯ ಮಂಡಿಸಿದಲ್ಲಿ ಅದನ್ನು ಬೆಂಬಲಿಸುವುದಾಗಿ ತಿಳಿಸಿದೆ.

ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅಧ್ಯಕ್ಷತೆಯಲ್ಲಿ ಸೋಮವಾರ ಚೆನ್ನೈನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT