ADVERTISEMENT

ಎರಡನೇ ದಿನಕ್ಕೆ ಕಾಲಿಟ್ಟ ಅಣ್ಣಾ ಹಜಾರೆ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 7:15 IST
Last Updated 6 ಏಪ್ರಿಲ್ 2011, 7:15 IST
ಎರಡನೇ ದಿನಕ್ಕೆ ಕಾಲಿಟ್ಟ ಅಣ್ಣಾ ಹಜಾರೆ ಸತ್ಯಾಗ್ರಹ
ಎರಡನೇ ದಿನಕ್ಕೆ ಕಾಲಿಟ್ಟ ಅಣ್ಣಾ ಹಜಾರೆ ಸತ್ಯಾಗ್ರಹ   

ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರದ ವಿರುದ್ಧ  ಜನ್ ಲೋಕಪಾಲ್ ಮಸೂದೆಯ ಸಮಗ್ರ ಕಾನೂನು ಜಾರಿಗೆ ಆಗ್ರಹಿಸಿ  ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮತ್ತು ಬೆಂಬಲಿಗರು  ಮಂಗಳವಾರ ಇಲ್ಲಿ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ  ಯಶಸ್ವಿ  ಎರಡನೇ ದಿನಕ್ಕೆ ಕಾಲಿರಿಸಿದೆ.

ಇಲ್ಲಿನ ಜಂತರ್ ಮಂತರ್ ನಲ್ಲಿ  ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಬುಧವಾರ  5000ಕ್ಕೂ ಅಧಿಕ ಮಂದಿ ಅವರೊಂದಿಗೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. 

ಮಹಾತ್ಮಾ ಗಾಂಧಿ ಅವರದು ಮೊದಲ ಸತ್ಯಾಗ್ರಹವಾಗಿದ್ದರೆ, ಇದನ್ನು ಎರಡನೇ ಸತ್ಯಾಗ್ರಹ ಎಂದು ಹೇಳಲಾಗುತ್ತಿದೆ. ಇದಕ್ಕೆ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.  ಬುಧವಾರ 400ಕ್ಕೂ ಅಧಿಕ ಪಟ್ಟಣಗಳಲ್ಲಿ ಅವರನ್ನು ಬೆಂಬಲಿಸಿ ರ್ಯಾಲಿ,  ಪ್ರದರ್ಶನ, ಮೆರವಣಿಗೆ ಹಾಗೂ ಸತ್ಯಾಗ್ರಹಗಳನ್ನು ನಡೆಸಲಾಗುತ್ತಿದೆ.

ADVERTISEMENT

 ‘ಭ್ರಷ್ಟಾಚಾರ ಪಿಡುಗನ್ನ  ನಿಗ್ರಹಿಸಲು ಜನ್ ಲೋಕ್‌ಪಾಲ್ ಮಸೂದೆಯ (ನಾಗರಿಕರ ಓಂಬುಡ್ಸ್‌ಮನ್ ಮಸೂದೆ) ಕರಡು ಸಿದ್ಧಪಡಿಸಲು ಅಧಿಕಾರಿಗಳು ಮತ್ತು ನಾಗರಿಕರು- ಬುದ್ಧಿಜೀವಿಗಳನ್ನು ತಲಾ ಶೇ 50 ರಷ್ಟು ಪ್ರಮಾಣದ ಜಂಟಿ ಸಮಿತಿ ರಚಿಸಬೇಕು~ ಎಂದು ಒತ್ತಾಯಿಸುತ್ತಿರುವ ಅಣ್ಣಾ ಹಜಾರೆ ಅವರು, ~ನಾನು ಸರ್ಕಾರವನ್ನು ಕಾಯುತ್ತಿಲ್ಲ, ಸರ್ಕಾರವೇ ಜನಾಭಿಪ್ರಾಯಕ್ಕೆ ಮಣಿಯಬೇಕು~ ಎಂದು  ಹೇಳಿದ್ದಾರೆ.

ಸುಮಾರು 72 ವರ್ಷದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಪರೀಕ್ಷಿಸಿ ವೈದ್ಯರು, ರಕ್ತದೊತ್ತಡ ಸರಿಯಿದೆ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರೆ,  ಅವರು ~ನನಗೆ ಸ್ವಲ್ಪ ಸುಸ್ತು ಅಷ್ಟೇ, ನಾನು ಇನ್ನೂ  ಹತ್ತು ಹನ್ನೊಂದು ದಿನಗಳವರೆಗೆ ಉಪವಾಸ ಕೂಡಬಲ್ಲೆ~  ಎಂದಿದ್ದಾರೆ.

ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ನಿಲುವುಗಳಿಲ್ಲದ ಸರ್ಕಾರ ಸಿದ್ಧಪಡಿಸಿರುವ  ಕರಡು  ಮಸೂದೆಗೆ ಪ್ರತಿಯಾಗಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ವಕೀಲ ಪ್ರಶಾಂತ್ ಭೂಷಣ್ ಮೊದಲಾದವರು ಸಿದ್ಧಪಡಿಸಿರುವ  ಜನ್ ಲೋಕ್‌ಪಾಲ್ ಮಸೂದೆಯ (ನಾಗರಿಕರ ಓಂಬುಡ್ಸ್‌ಮನ್ ಮಸೂದೆ) ಮಸೂದೆಯನ್ನು  ಸರ್ಕಾರ ಅಂಗೀಕರಿಸಬೇಕೆಂದು ಅವರ ಒತ್ತಾಯಿಸಿದ್ದಾರೆ.

ಸಮಾಜಸೇವಾ ಕಾರ್ಯಕರ್ತರಾದ ನ್ಯಾಯಮೂರ್ತಿಗಳು ಹಿರಿಯ ವಕೀಲರುಗಳಿದ್ದ ಸಮಿತಿ ಸಿದ್ಧಪಡಿಸಿರುವ ಕರಡು ಮಸೂದೆಯಲ್ಲಿ,, ಲೋಕಪಾಲರು ಸರ್ಕಾರದ ಆಧಿನದಲ್ಲಿರದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು, ಭ್ರಷ್ಟಾಚಾರ ಪ್ರಕರಣವನ್ನು ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಬೇಕು, ಕನಿಷ್ಠ ಎಂದರೆ ಐದು ವರ್ಷ ಮತ್ತು ಗರಿಷ್ಠವೆಂದರೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಸೂಚಿಸಿದ್ದರೆ, ಸರ್ಕಾರದ ಕರಡು ಮಸೂದೆಯಲ್ಲಿ ಈ ಶಿಕ್ಷೆಯ ಪ್ರಮಾಣವನ್ನು 6 ತಿಂಗಳು ಮತ್ತು 7 ವರ್ಷಕ್ಕೆ ನಿಗದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.