ADVERTISEMENT

ಎಲುಬು ಬ್ಯಾಂಕ್‌ಗೆ ಹೊಸ ಹುರುಪು ತಂದ ಮೂಳೆ, ಚರ್ಮ

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಎಲುಬು ಬ್ಯಾಂಕ್‌ಗೆ ಹೊಸ ಹುರುಪು ತಂದ ಮೂಳೆ, ಚರ್ಮ
ಎಲುಬು ಬ್ಯಾಂಕ್‌ಗೆ ಹೊಸ ಹುರುಪು ತಂದ ಮೂಳೆ, ಚರ್ಮ   

ನವದೆಹಲಿ: ಎರಡೂವರೆ ವರ್ಷಗಳಿಂದ ಎಲುಬು ಮತ್ತು ಚರ್ಮದ ದಾನಿಗಳಿಗಾಗಿ ಕಾಯುತ್ತಿದ್ದ, ಏಮ್ಸ್‌ನಲ್ಲಿರುವ (ಎಐಐಎಮ್ಎಸ್) ದೇಶದ ಏಕೈಕ ಪೂರ್ಣ ಪ್ರಮಾಣದ ಎಲುಬು ಬ್ಯಾಂಕ್‌ಗೆ ಎಲುಬು ಮತ್ತು ಚರ್ಮ ದಾನ ಬಂದಿರುವುದು ಹೊಸ ಹುರುಪು ನೀಡಿದೆ.

ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಿಂದ (ಎನ್ಒಟಿಟಿಒ) ಈ ದಾನ ಬಂದಿದೆ. 67 ವರ್ಷದ ಮಹಿಳೆಯೊಬ್ಬರು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸೋಮವಾರ ಮೃತರಾಗಿದ್ದರು. ಕುಟುಂಬದವರು ಅವರ ಎಲುಬು ಮತ್ತು ಚರ್ಮವನ್ನು ದಾನ ನೀಡಿದ್ದಾರೆ.

‘ಎನ್ಒಟಿಟಿಒ ಮುಖ್ಯಸ್ಥರು ಕರೆ ಮಾಡಿ ದಾನಿಗಳು ಸಿಕ್ಕಿರುವುದಾಗಿ ಹೇಳಿದರು. ಇದರಿಂದ ಸಂಸ್ಥೆಗೆ ನವಚೈತನ್ಯ ಬಂದಂತಾಗಿದೆ’ ಎಂದು ಏಮ್ಸ್‌ನ ಅಪಘಾತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಸಂಸ್ಥೆಯ ಸ್ಥಾಪಕ ಡಾ. ರಾಜೇಶ್ ಮಲ್ಹೋತ್ರಾ ಹೇಳಿದ್ದಾರೆ.

ADVERTISEMENT

ಈ ಯೋಜನೆಯಲ್ಲಿ ಎನ್ಒಟಿಟಿಒ ಜೊತೆ ಸಹಯೋಗದಲ್ಲಿ ಮುಂದುವರಿಯಲು ಏಮ್ಸ್ ನಿರ್ಧರಿಸಿದೆ.

1999ರಲ್ಲಿ ಎಲುಬು ಬ್ಯಾಂಕ್ ಸ್ಥಾಪನೆಯಾಗಿದ್ದು, ಈವರೆಗೆ 24 ಕಳೇಬರಗಳ ದಾನ ಮಾತ್ರ ಬಂದಿದೆ.

ಜಾಗೃತಿ ಕೊರತೆ, ದೇಹ ವಿಕಾರಗೊಳ್ಳುವ ಹೆದರಿಕೆ ಮತ್ತು ಧಾರ್ಮಿಕ ನಂಬಿಕೆಗಳ ಕಾರಣದಿಂದ ಕಳೆದ ಹದಿನೆಂಟು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಕಳೇಬರಗಳು ದಾನವಾಗಿ ಬಂದಿವೆ. ಹಾಗಾಗಿ ಈ ಸಂಸ್ಥೆಯ ಕಾರ್ಯವು ಇನ್ನೂ ಪ್ರಾರಂಭಿಕ ಹಂತದಲ್ಲೇ ಇದೆ.
‘ಮೃತರ ದೇಹದಿಂದ ಮೂಳೆಯನ್ನು ಹೊರತೆಗೆದ ನಂತರ ಮರದ ತುಂಡುಗಳನ್ನು ಒಳಸೇರಿಸಿ ದೇಹಕ್ಕೆ ಮೂಲ ರೂಪ ನೀಡಲಾಗುವುದು’ ಎಂದು ಮಲ್ಹೋತ್ರಾ ಹೇಳಿದ್ದಾರೆ.

ವ್ಯಕ್ತಿ ಮೃತಪಟ್ಟ 12 ಗಂಟೆ ಒಳಗಾಗಿ ಎಲುಬನ್ನು ದೇಹದಿಂದ ತೆಗೆಯಬೇಕು. ಶೀತಲ ವಾತಾವರಣದಲ್ಲಿಟ್ಟಿದ್ದರೆ 38 ಗಂಟೆಯ ಒಳಗೆ ಈ ಕೆಲಸ ಆಗಬೇಕು. ಹೀಗೆ ತೆಗೆದ ಎಲುಬನ್ನು –70 ಡಿಗ್ರಿ ಸೆಲ್ಶಿಯಸ್‌ನಲ್ಲಿ ಸಂರಕ್ಷಿಸಿದರೆ ಐದು ವರ್ಷಗಳವರೆಗೂ ಇಡಬಹುದು. ಭಾರತದಲ್ಲಿ ಪ್ರತಿ ವರ್ಷ ಅಪಘಾತಕ್ಕೆ ಒಳಗಾದ ಮತ್ತು ಕ್ಯಾನ್ಸರ್‌ಗೆ ತುತ್ತಾದ ಸಾವಿರಾರು ಜನರು ಎಲುಬು ಕಸಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಇವರಲ್ಲಿ ಶೇ 35 ಜನರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.