ADVERTISEMENT

ಎಲೆಕ್ಟ್ರಾನಿಕ್‌ ರೂಪದ ದಾಖಲೆಗೆ ಅವಕಾಶ: ಮದ್ರಾಸ್‌ ಹೈಕೋರ್ಟ್‌

ಲಾರಿ ಮಾಲೀಕರಿಂದ ಅರ್ಜಿ: ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲೇಖಿಸಿದ ನ್ಯಾಯಾಲಯ

ಪಿಟಿಐ
Published 6 ಡಿಸೆಂಬರ್ 2018, 19:23 IST
Last Updated 6 ಡಿಸೆಂಬರ್ 2018, 19:23 IST
s
s   

ಚೆನ್ನೈ: ಎಲೆಕ್ಟ್ರಾನಿಕ್‌ ರೂಪದಲ್ಲಿರುವ ವಾಹನಗಳ ದಾಖಲೆಗಳನ್ನು ತೋರಿಸಲು ಚಾಲಕರಿಗೆ ಅವಕಾಶವಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ ಪೊಲೀಸರು ಅಥವಾ ಯಾವುದೇ ಅಧಿಕಾರಿಗಳು ಚಾಲಕರನ್ನು ವಾಹನಗಳ ದಾಖಲೆಗಳ ಬಗ್ಗೆ ಕೇಳಿದಾಗ ಎಲೆಕ್ಟ್ರಾನಿಕ್‌ ರೂಪದಲ್ಲಿರುವುದನ್ನು ತೋರಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಲೈಸನ್ಸ್‌ ಸೇರಿದಂತೆ ಮೂಲ ದಾಖಲೆಗಳನ್ನೇ ಚಾಲಕರು ಹೊಂದಿರಬೇಕು ಎಂದು ತಮಿಳುನಾಡು ಸಂಚಾರ ಯೋಜನಾ ಘಟಕದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಅಖಿಲ ಭಾರತ ಸರಕು ವಾಹನಗಳ ಮಾಲೀಕರ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಲಾರಿ ಮಾಲೀಕರ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.

ADVERTISEMENT

ವಾಹನಗಳ ದಾಖಲೆಗಳ ಕುರಿತು ಕೇಂದ್ರೀಯ ಮೋಟಾರು ವಾಹನ ನಿಯಮಾವಳಿ 139ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಅನ್ವಯ ಲೈಸನ್ಸ್‌, ವಿಮೆ, ವಾಹನ ಸ್ಥಿತಿಗತಿ ಪ್ರಮಾಣಪತ್ರ, ಮಾಲಿನ್ಯ ತಪಾಸಣೆ ಪ್ರಮಾಣಪತ್ರಗಳನ್ನು ಮೂಲ ರೂಪದಲ್ಲಿ ಅಥವಾ ಎಲೆಕ್ಟ್ರಾನಿಕ್‌ ರೂಪದಲ್ಲಿಯೂ ತೋರಿಸಲು ಅವಕಾಶವಿದೆ ಎಂದು ಸಂಘಟನೆಗಳು ಪ್ರತಿಪಾದಿಸಿದ್ದವು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರ ನವೆಂಬರ್‌ 2ರಂದು ತಿದ್ದುಪಡಿ ಮಾಡಿರುವುದರಿಂದ ಅರ್ಜಿ ಸಲ್ಲಿಕೆಗೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಡಾ. ವಿನೀತ್‌ ಕೊಠಾರಿ ಮತ್ತು ಡಾ. ಅನಿತಾ ಸುಮಂತ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಬಗ್ಗೆ ಆದೇಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.