ADVERTISEMENT

ಎಸ್‌ಪಿಯಿಂದ ಅಡ್ಡ ಮತದಾನ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2017, 19:30 IST
Last Updated 26 ಜೂನ್ 2017, 19:30 IST
ಎಸ್‌ಪಿಯಿಂದ ಅಡ್ಡ ಮತದಾನ ಸಾಧ್ಯತೆ
ಎಸ್‌ಪಿಯಿಂದ ಅಡ್ಡ ಮತದಾನ ಸಾಧ್ಯತೆ   

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ತಂದೆ, ಪಕ್ಷದ ಹಿರಿಯ ಧುರೀಣ ಮುಲಾಯಂ ಸಿಂಗ್ ಅವರು ರಾಷ್ಟ್ರಪತಿ ಅಭ್ಯರ್ಥಿ ಬೆಂಬಲದ ವಿಚಾರದಲ್ಲಿ ಭಿನ್ನ ನಿಲುವು ತಳೆದಿದ್ದಾರೆ. ಹಾಗಾಗಿ  ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಅಡ್ಡ ಮತದಾನ ನಡೆಯುವ ಸಾಧ್ಯತೆ ಇದೆ.

ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಮುಲಾಯಂ ಹೇಳಿದ್ದರೆ, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸುವುದಾಗಿ ಅಖಿಲೇಶ್ ಹೇಳಿದ್ದಾರೆ. ಇದರಿಂದಾಗಿ ಪಕ್ಷದ ಶಾಸಕರು ಮತ್ತು ಸಂಸದರು ಅಡ್ಡ ಮತದಾನ ಮಾಡುವ ಸಾಧ್ಯತೆಗಳಿವೆ.

ಮುಲಾಯಂ ಅವರಿಗೆ ನಿಷ್ಠರಾಗಿರುವ ಶಾಸಕರು ಮತ್ತು ಸಂಸದರು ಕೋವಿಂದ್ ಅವರಿಗೆ ಮತ ಹಾಕಲಿದ್ದಾರೆ. ತಾವು ಮುಲಾಯಂ ಅವರ ಆದೇಶವನ್ನು ಪಾಲಿಸುವುದಾಗಿ ಶಿವಪಾಲ್ ಯಾದವ್ ಹೇಳಿದ್ದಾರೆ.

ADVERTISEMENT

ಮುಲಾಯಂ ಬಿಟ್ಟರೆ ಉಳಿದ ನಾಲ್ವರು ಎಸ್‌ಪಿ ಸಂಸದರು ಅಖಿಲೇಶ್ ಆದೇಶವನ್ನು ಪಾಲಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಎಸ್‌ಪಿ ರಾಜ್ಯಸಭಾ ಸದಸ್ಯರಲ್ಲೂ ರಾಷ್ಟ್ರಪತಿ ಅಭ್ಯರ್ಥಿಯ ವಿಚಾರದಲ್ಲಿ ಭಿನ್ನಮತ ಇದೆ. ಪಕ್ಷದಿಂದ ಉಚ್ಚಾಟನೆಗೊಂಡಿರುವ ಅಮರ್ ಸಿಂಗ್ ಅವರು ಮುಲಾಯಂ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಉಳಿದವರು ಅಖಿಲೇಶ್ ಸೂಚಿಸಿದ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಐವರು ಹಾಗೂ ರಾಜ್ಯಸಭೆಯಲ್ಲಿ 18 ಸದಸ್ಯರು ಇದ್ದಾರೆ. ಇದಲ್ಲದೆ ಉತ್ತರಪ್ರದೇಶ ವಿಧಾನಸಭೆಯಲ್ಲಿ 47 ಶಾಸಕರಿದ್ದಾರೆ.

ಪಕ್ಷದ ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಅಖಿಲೇಶ್ ಎಚ್ಚರಿಕೆ ನೀಡಿದ್ದರೂ ಕೆಲವು ಶಾಸಕರು ಮುಲಾಯಂ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಮುಲಾಯಂ ಮನವೊಲಿಸುವ ಕೊನೆ ಗಳಿಗೆಯ ಯತ್ನ ನಡೆಯುತ್ತಿದ್ದರೂ ಅವರು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.