ADVERTISEMENT

ಎಸ್‌ಐಟಿ ನೇಮಕಕ್ಕೆ ಆಗ್ರಹ

ಪತ್ರಕರ್ತನ ಸಜೀವ ದಹನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2015, 19:30 IST
Last Updated 10 ಜೂನ್ 2015, 19:30 IST
ಜಗೇಂದ್ರ ಸಿಂಗ್
ಜಗೇಂದ್ರ ಸಿಂಗ್   

ಡೆಹರಾಡೂನ್‌ (ಪಿಟಿಐ): ಉತ್ತರ ಪ್ರದೇಶದ ಶಹ್ಜೆನಪುರದಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ಜೀವಂತ ಸುಟ್ಟು ಹಾಕಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಸಿ.ಕೆ. ಪ್ರಸಾದ್‌, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು, ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆ ನಿಜಕ್ಕೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ಸಚಿವರೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪ ಇರುವುದರಿಂದ ರಾಜ್ಯ ಸರ್ಕಾರ  ಸತ್ಯವನ್ನು ಹೊರಗೆಡವಲು ಪ್ರಾಮಾಣಿಕ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಸ್ವತಃ ಪತ್ರಿಕಾ ಮಂಡಳಿಯೂ ಸತ್ಯ ಶೋಧನಾ ಸಮಿತಿಯೊಂದನ್ನು ನೇಮಿಸಲಿದ್ದು, ಅದು ಸ್ಥಳಕ್ಕೆ ತೆರಳಿ ಮಾಹಿತಿ ಕಲೆಹಾಕಿ ಸಲ್ಲಿಸುವ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಕರ್ತರ ಒಕ್ಕೂಟ ಖಂಡನೆ (ಗುವಾಹಟಿ ವರದಿ): ಜಗೇಂದ್ರ ಸಿಂಗ್ ಅವರ ಸಜೀವ ದಹನ ಪ್ರಕರಣದಲ್ಲಿ ಅಲ್ಲಿನ ಸಚಿವ ಮತ್ತು ಇತರೆ ಐದು ಮಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಸ್ಸಾ ಪತ್ರಕರ್ತರ ಒಕ್ಕೂಟ ಒತ್ತಾಯಿಸಿದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಸಚಿವ ರಾಮ್‌ ಮೂರ್ತಿ ಸಿಂಗ್ ವರ್ಮಾ ಮತ್ತು ಐವರ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ.

ಅಕ್ರಮ ಗಣಿಗಾರಿಕೆ ಮತ್ತು ಭೂವ್ಯವಹಾರದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಜಗೇಂದ್ರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದರು.  ಜೂನ್‌ 1ರಂದು ಜಗೇಂದ್ರ ಅವರ ಮನೆಗೆ ನುಗ್ಗಿದ ಪೊಲೀಸರು ಅವರಿಗೆ ಬೆಂಕಿ ಹಚ್ಚಿದರು. ಬಳಿಕ ಅವರನ್ನು ಲಖನೌದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ತನ್ನ ತನಿಖಾ ವರದಿಗಳು ಮತ್ತು  ಬರಹದಲ್ಲಿ ಪ್ರಸ್ತಾಪಿಸಿದ ಆರೋಪಗಳ ಕುರಿತು ತನಗೆ ಹಾಗೂ ತನ್ನ ಕುಟುಂಬಕ್ಕೆ ವರ್ಮಾ ಬೆದರಿಕೆ ಹಾಕಿದ್ದರು ಎಂದು ಜಗೇಂದ್ರ ಸಾಯುವ ಮೊದಲು ವಿವರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜಗೇಂದ್ರ ಸೋಮವಾರ ರಾತ್ರಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.