ADVERTISEMENT

ಏಕಕಾಲಕ್ಕೆ ಚುನಾವಣೆ: 24 ಲಕ್ಷ ಇವಿಎಂ ಅಗತ್ಯ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್‌
ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್‌   

ನವದೆಹಲಿ: ಒಂದು ವೇಳೆ 2019ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದರೆ ಒಟ್ಟು 24 ಲಕ್ಷ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಮತ್ತು ಅಷ್ಟೇ ಸಂಖ್ಯೆಯ ಮತದಾನ ದೃಢೀಕರಣ ರಸೀದಿ ಯಂತ್ರಗಳು (ವಿವಿಪ್ಯಾಟ್‌) ಬೇಕಾಗಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಬೇಡಿಕೆ ಇಟ್ಟಿದೆ.

ಮೇ 16ರಂದು ಕಾನೂನು ಆಯೋಗ ಸದಸ್ಯರೊಂದಿಗೆ ನಡೆದ ಚರ್ಚೆಯ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಈ ಬೇಡಿಕೆ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಯೊಂದಕ್ಕೆ ಮಾತ್ರ ಅಗತ್ಯವಾದ 12 ಲಕ್ಷ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳು ಸದ್ಯ ಆಯೋಗದ ಬಳಿ ಇವೆ. ಒಂದು ವೇಳೆ ಎರಡೂ ಚುನಾವಣೆ ಏಕಕಾಲಕ್ಕೆ ನಡೆದರೆ ಈ ಯಂತ್ರಗಳು ಸಾಕಾಗುವುದಿಲ್ಲ.

ADVERTISEMENT

ಈ ಸಂಖ್ಯೆ ದುಪ್ಪಟ್ಟಾಗಬಹುದು ಎಂದು ಆಯೋಗದ ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದ ಒಟ್ಟು 10 ಲಕ್ಷ ಮತಗಟ್ಟೆಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಪ್ರತ್ಯೇಕವಾಗಿ ಒಟ್ಟು 20 ಲಕ್ಷ ಮತಯಂತ್ರ ಮತ್ತು ವಿವಿಪ್ಯಾಟ್‌ ಬೇಕಾಗುತ್ತವೆ. ಒಂದು ವೇಳೆ ಯಂತ್ರ ಕೈಕೊಟ್ಟಲ್ಲಿ ಅವನ್ನು ಬದಲಿಸಲು ಶೇ 20ರಷ್ಟು ಹೆಚ್ಚುವರಿ ಯಂತ್ರಗಳನ್ನು ಕಾಯ್ದಿರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ 12 ಲಕ್ಷ ಇವಿಎಂ ಮತ್ತು ಅಷ್ಟೇ ಸಂಖ್ಯೆಯ ವಿವಿಪ್ಯಾಟ್‌ ಖರೀದಿಗೆ ಒಟ್ಟು ₹4,500 ಕೋಟಿ ಬೇಡಿಕೆಯನ್ನು ಆಯೋಗ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ–ಹಗಲು ಕೆಲಸ ಅನಿವಾರ್ಯ

* ದಿ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಈ ಎರಡು ಸಂಸ್ಥೆಗಳು ಮತಯಂತ್ರ ಮತ್ತು ವಿವಿಪ್ಯಾಟ್‌ ತಯಾರಿಸುವ ಹೊಣೆ ಹೊತ್ತಿವೆ

* 2019ರೊಳಗೆ 12 ಲಕ್ಷ ಯಂತ್ರಗಳ ತಯಾರಿಕೆಗೆ ಎರಡೂ ಸಂಸ್ಥೆಗಳ ಸಿಬ್ಬಂದಿ ಹಗಲು, ರಾತ್ರಿ ಕೆಲಸ ಮಾಡಬೇಕಾಗುತ್ತದೆ.

* ಈಗಾಗಲೇ ಬಳಕೆಯಲ್ಲಿರುವ ಕೆಲವು ಮತಯಂತ್ರಗಳು 2019ರ ನಂತರ 15 ವರ್ಷ ಪೂರೈಸಲಿರುವ ಕಾರಣ ಅವುಗಳ ಬಳಕೆ ಸ್ಥಗಿತಗೊಳಿಸುವ ಸಾಧ್ಯತೆ

* 2024ರಲ್ಲಿ ನಡೆಯುವ ಚುನಾವಣೆಗಳಿಗೆ ಹೊಸ ಮತಯಂತ್ರ ಖರೀದಿಸಲು ₹1,700 ಕೋಟಿ ವೆಚ್ಚ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.