ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳು ಹಾಗೂ ಆಡಳಿತ ಮಂಡಲಿ ಬಿಕ್ಕಟ್ಟು ಇನ್ನಷ್ಟು ಜಟಿಲವಾಗಿದ್ದು, ‘ಕೆಲಸ ಮಾಡದಿದ್ದರೆ ವೇತನವೂ ಇಲ್ಲ’ ನೀತಿ ಅನುಸರಿಸುವುದಾಗಿ ಆಡಳಿತ ಮಂಡಲಿ ಮಂಗಳವಾರ ಪ್ರಕಟಿಸಿದೆ. ಇದೇ ವೇಳೆ ಆಡಳಿತ ಮಂಡಲಿ ಹಾಗೂ ಪೈಲಟ್ ಸಂಘಟನೆ ಎರಡನ್ನೂ ಅವುಗಳ ಜಿಗುಟು ಧೋರಣೆಗಾಗಿ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, ಬಿಕ್ಕಟ್ಟು ಬಗೆಹರಿಸಲು ಸಿದ್ಧಾರ್ಥ ಲೂಥ್ರ ಅವರನ್ನು ತಜ್ಞ ಸಲಹೆಗಾರರನ್ನಾಗಿ ನೇಮಿಸಿದೆ.
ಏರ್ ಇಂಡಿಯಾ ವಕೀಲ ಲಲಿತ್ ಭಾಸಿನ್ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ ನ್ಯಾಯಮೂರ್ತಿ ಬಿ.ಡಿ.ಅಹಮ್ಮದ್ ನೇತತ್ವದ ವಿಭಾಗೀಯ ಪೀಠ ‘ನಿಮ್ಮನ್ನು ನೋಡಿದರೆ, ಮುಷ್ಕರ ಕೊನೆಗೊಳಿಸಬೇಕೆಂಬ ಇರಾದೆ ಇದ್ದಂತಿಲ್ಲ’ ಎಂದು ಚಾಟಿ ಬೀಸಿತು.
ಆದರೂ, ಏರ್ ಇಂಡಿಯಾ ಇನ್ನಷ್ಟು ಕಠಿಣ ನಿಲುವು ತಳೆಯಲು ಮುಂದಾಗಿದೆ. ಯಾರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲವೋ ಅವರಿಗೆ ವೇತನವನ್ನೂ ನೀಡುವುದಿಲ್ಲ. ಅಂತಹ ಪೈಲಟ್‌ಗಳು ತಕ್ಷಣವೇ ಸೇವೆಗೆ ಹಾಜರಾಗದಿದ್ದರೆ ಏಪ್ರಿಲ್ ತಿಂಗಳ ವೇತನವನ್ನು ತಡೆಹಿಡಿಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
‘ನ್ಯಾಯಾಂಗ ನಿಂದನೆ ಕುರಿತ ದಾವೆಯ ಬಗ್ಗೆ ದೆಹಲಿ ಹೈಕೋರ್ಟ್ ತೀರ್ಪನ್ನು ನಾವು ಎದುರು ನೋಡುತ್ತಿದ್ದೇವೆ. ಅದಕ್ಕೆ ಮುನ್ನ ಪೈಲಟ್‌ಗಳ ಜತೆ ಮಾತನಾಡುವ ಪ್ರಶ್ನೆಯೇ ಇಲ್ಲ’ ಎಂದು ವಿಮಾನಯಾನ ಸಚಿವ ವಯಲಾರ್ ರವಿ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಏರ್ ಇಂಡಿಯಾದ ವಿಮಾನ ಸೇವಾ ವ್ಯತ್ಯಯ ಏಳನೇ ದಿನ ಕೂಡ ಮುಂದುವರಿಯಿತು. ತಮ್ಮ ಬೇಡಿಕೆಗಳನ್ನು ನಿಗದಿತ ಕಾಲಮಿತಿಗಳೊಳಗೆ ಪರಿಶೀಲಿಸುವುದಾಗಿ ಆಡಳಿತ ಮಂಡಲಿಯು ದೆಹಲಿ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟ ನಂತರವಷ್ಟೇ ಮುಷ್ಕರವನ್ನು ಕೈಬಿಡುವುದಾಗಿ (ಐಸಿಪಿಎ) ಪೈಲಟ್‌ಗಳು ಪಟ್ಟು ಹಿಡಿದಿದ್ದಾರೆ.
ಕಳೆದ ಐದು ದಿನಗಳಿಂದ ದೇಶೀಯ ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಸ್ಥಗತಿಗೊಳಿಸಿರುವ ಏರ್ ಇಂಡಿಯಾ, ಇದೀಗ ಕೇವಲ ಶೇ 10ರಷ್ಟು ವಿಮಾನಗಳನ್ನು ಓಡಿಸುತ್ತಿದೆ. ಪ್ರತಿದಿನ ಸಂಚರಿಸುತ್ತಿದ್ದ 320 ವಿಮಾನಗಳ ಪೈಕಿ ಈಗ ಕೇವಲ 40 ವಿಮಾನಗಳು ಸೇವೆಯನ್ನು ಒದಗಿಸುತ್ತಿವೆ.
ತ್ರಿಪಕ್ಷೀಯ ಸಭೆಯ ನಂತರ ಪರಿಸಮಾಪ್ತಿ ವರದಿ ಸಲ್ಲಿಸಿದ ಮುಖ್ಯ ಕಾರ್ಮಿಕ ಆಯುಕ್ತರು, ಬಿಕ್ಕಟ್ಟು ಪರಿಹರಿಸಲು ಯಾವುದೇ ಪ್ರಯತ್ನ ಮಾಡದಿರುವುದಕ್ಕೆ ಆಡಳಿತ ಮಂಡಲಿಯೇ ಕಾರಣ ಎಂಬ ಅಭಿಪ್ರಾಯ ದಾಖಲಿಸಿದ್ದಾರೆ ಎಂದು ಪೈಲಟ್‌ಗಳ ಒಕ್ಕೂಟ ತಿಳಿಸಿದೆ.
9 ಪೈಲಟ್‌ಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳು ನಡೆಸುತ್ತಿರುವ ಮುಷ್ಕರವನ್ನು ಹಿಂಪಡೆಯುವಂತೆ ಸೂಚಿಸಿ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಮಂಗಳವಾರ, ವಜಾಗೊಂಡ ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆಯ (ಐಸಿಪಿಎ) ಒಂಬತ್ತು ಪದಾಧಿಕಾರಿಗಳಿಗೆ ನ್ಯಾಯಾಂಗ ನಿಂದನಾ ನೋಟಿಸ್ ನೀಡಿದೆ.
ನ್ಯಾಯಮೂರ್ತಿ ಬಿ.ಡಿ.ಅಹಮದ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಐಸಿಪಿಎಯ ಒಂಬತ್ತು ಸದಸ್ಯರಿಗೆ ನ್ಯಾಯಾಂಗ ನಿಂದನಾ ನೋಟಿಸ್ ನೀಡುವಂತೆ ಮತ್ತು ಮೇ 25ರಂದು ಈ ವಿಚಾರ ಮರು ವಿಚಾರಣೆಗೆ ಒಳ ಪಡಿಸುವಂತೆ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.