ADVERTISEMENT

ಐಎಎಸ್ ಅಧಿಕಾರಿ ಖೇಮ್ಕ ವರ್ಗ: ಹರ್ಯಾಣ ಸರ್ಕಾರಕ್ಕೆ ಕೇಜ್ರಿವಾಲ್ ತರಾಟೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:55 IST
Last Updated 16 ಅಕ್ಟೋಬರ್ 2012, 7:55 IST
ಐಎಎಸ್ ಅಧಿಕಾರಿ ಖೇಮ್ಕ ವರ್ಗ: ಹರ್ಯಾಣ ಸರ್ಕಾರಕ್ಕೆ ಕೇಜ್ರಿವಾಲ್ ತರಾಟೆ
ಐಎಎಸ್ ಅಧಿಕಾರಿ ಖೇಮ್ಕ ವರ್ಗ: ಹರ್ಯಾಣ ಸರ್ಕಾರಕ್ಕೆ ಕೇಜ್ರಿವಾಲ್ ತರಾಟೆ   

ನವದೆಹಲಿ (ಪಿಟಿಐ): ರಾಬರ್ಟ್ ವಾದ್ರಾ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಅವರಿಗೆ ಸಂಬಂಧಿಸಿದ ಭೂ ಹಗರಣಗಳ ತನಿಖೆಗೆ ಆದೇಶ ನೀಡಿದ ಹರ್ಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ ಖೇಮ್ಕ ಅವರ ವರ್ಗಾವಣೆಯನ್ನು ಮಂಗಳವಾರ ಇಲ್ಲಿ ತರಾಟೆಗೆ ತೆಗೆದುಕೊಂಡ ಅರವಿಂದ ಕೇಜ್ರಿವಾಲ್ ಅವರು ~ವಾದ್ರಾ ಮತ್ತು ಡಿಎಲ್ಎಫ್ ಗೆ ಸಂಬಂಧಿಸಿದಂತೆ ತನಿಖೆಗೆ ಆಜ್ಞಾಪಿಸಿದ್ದಕ್ಕಾಗಿಯೇ ಈ ವರ್ಗಾವಣೆ ಮಾಡಲಾಗಿದೆ~ ಎಂದು ಆಪಾದಿಸಿದರು.

ಹರ್ಯಾಣದ ಭೂ ಕ್ರೋಡೀಕರಣ ಹಾಗೂ ಭೂದಾಖಲೆಗಳ ಮಹಾನಿರ್ದೇಶಕ ಮತ್ತು ಇನ್ ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಆದ 1991ರ ತಂಡದ ಐಎಎಸ್ ಅಧಿಕಾರಿ ಅಶೋಕ ಖೇಮ್ಕ ಅವರನ್ನು ಈ ಹುದ್ದೆ ವಹಿಸಿಕೊಂಡ ಮೂರು ತಿಂಗಳುಗಳ ಒಳಗಾಗಿ ವರ್ಗಾವಣೆ ಮಾಡಲಾಗಿದೆ.

ಗುಡಗಾಂವ್, ಫರೀದಾಬಾದ್, ಪಲ್ವಾಲ್ ಮತ್ತು ಮೇವತ್ ನಲ್ಲಿ 2005ರಿಂದ ನಡೆದ ಭೂ ವ್ಯವಹಾರಗಳ ತನಿಖೆ ನಡೆಸುವಂತೆ ಖೇಮ್ಕ ಆಜ್ಞಾಪಿಸಿದ್ದರು.

~ಖೇಮ್ಕ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂದು ಹರ್ಯಾಣದ ಮುಖ್ಯಮಂತ್ರಿ ರಾಷ್ಟ್ರಕ್ಕೆ ಉತ್ತರ ನೀಡಬೇಕು. ಹರ್ಯಾಣದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ನೀತಿ ಏನು? ಆ ನೀತಿಯ ಅಡಿಯಲ್ಲಿ ವಾದ್ರಾ ಅವರಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಈ ವರ್ಗಾವಣೆ ನೀತಿಯ ಅಡಿಯಲ್ಲಿ ವರ್ಗಾವಣೆ ಮಾಡಬಹುದೇ?~ ಎಂದು ಪ್ರಶ್ನಿಸಿದ ಕೇಜ್ರಿವಾಲ್ ~ಹರ್ಯಾಣದಲ್ಲಿನ ವಾದ್ರಾ ಅವರ ಭೂ ಹಗರಣಗಳ ತನಿಖೆಗೆ ಆಜ್ಞಾಪಿಸಿದ್ದಕ್ಕಾಗಿ ಅಶೋಕ ಖೇಮ್ಕ ಅವರನ್ನು ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿದೆ ಎಂದು ದೂರಿದರು.

~ನಾವು ಇದನ್ನು ಕಟುವಾಗಿ ಖಂಡಿಸುತ್ತೇವೆ~ ಎಂದೂ ನುಡಿದ ಕೇಜ್ರಿವಾಲ್, ವಾದ್ರಾ ಮತ್ತು ಡಿಎಲ್ಎಫ್ ಮಧ್ಯೆ ನಡೆಯಬಹುದಾಗಿದ್ದ ವ್ಯವಹಾರವನ್ನು ಖೇಮ್ಕ ಬೆಳಕಿಗೆ ತಂದಿದ್ದರು ಮತ್ತು ಅದರ ರದ್ದಿಗೆ ಆಜ್ಞಾಪಿಸಿದ್ದರು ಎಂದು ಆಪಾದಿಸಿದರು.

ತನ್ನ ವರ್ಗಾವಣೆ ಬಗ್ಗೆ ದೂರಿ ಖೇಮ್ಕ ಅವರು ಹರ್ಯಾಣ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಪತ್ರದ ವಿವರ ಬಹಿರಂಗಕ್ಕೆ ನಿರಾಕರಿಸಿದ್ದಾರೆ. ಆದರೆ ಸೇವೆಯ 21 ವರ್ಷಗಳ ಅವಧಿಯಲ್ಲಿ ಮಾಡಲಾಗಿರುವ 40 ವರ್ಗಾವಣೆಗಳಿಂದ ತೊಂದರೆಗೀಡಾಗಿದ್ದೇನೆ ಎಂದು ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.