ADVERTISEMENT

ಐಎನ್‌ಎಕ್ಸ್ ಹಗರಣ: ನಿರೀಕ್ಷಣಾ ಜಾಮೀನಿಗೆ ಮಾಜಿ ಸಚಿವ ಚಿದಂಬರಂ ಅರ್ಜಿ

ಪಿಟಿಐ
Published 30 ಮೇ 2018, 15:52 IST
Last Updated 30 ಮೇ 2018, 15:52 IST
ಪಿ. ಚಿದಂಬರಂ (ಸಂಗ್ರಹ ಚಿತ್ರ)
ಪಿ. ಚಿದಂಬರಂ (ಸಂಗ್ರಹ ಚಿತ್ರ)   

ನವದೆಹಲಿ/ಚೆನ್ನೈ: ಏರ್‌ಸೆಲ್‌– ಮ್ಯಾಕ್ಸಿಸ್‌ ಮತ್ತು ಐಎನ್‌ಎಕ್ಸ್ ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು, ದೆಹಲಿ ಹೈಕೋರ್ಟ್‌ ಮತ್ತು ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು.

ಏರ್‌ಸೆಲ್‌– ಮ್ಯಾಕ್ಸಿಸ್‌ ಪ್ರಕರಣದಲ್ಲಿ ಜೂನ್‌ 5ರವರೆಗೆ ಚಿದಂಬರಂ ಅವರನ್ನು ಬಂಧಿಸಬಾರದು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದರು.

ಬಳಿಕ, ಚಿದಂಬರಂ ಪರ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಅಭಿಷೇಕ್‌ ಸಿಂಘ್ವಿ ಅವರು ಐಎನ್‌ಎಕ್ಸ್‌ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಎಸ್‌.ಪಿ. ಗಾರ್ಗ್‌ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ಬಳಿಕ ನ್ಯಾಯಮೂರ್ತಿ ಎ.ಕೆ. ಪಾಠಕ್‌ ಅವರಿಗೆ ಪ್ರಕರಣವನ್ನು ವರ್ಗಾಯಿಸಲಾಯಿತು. ಪಾಠಕ್‌ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ADVERTISEMENT

ಕಾನೂನು ಕ್ರಮ ತಡೆಗೆ ಹೈಕೋರ್ಟ್‌ ನಿರಾಕರಣೆ: ವಿದೇಶದಲ್ಲಿನ ಹೊಂದಿರುವ ಆಸ್ತಿ ಮತ್ತು ಹೂಡಿಕೆಯ ಬಗ್ಗೆ ಮಾಹಿತಿ ಸಲ್ಲಿಸದ ಕಾರಣಕ್ಕೆ ಹಿರಿಯ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ‌ಒತ್ತಾಯಿಸಿ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಮೊಕದ್ದಮೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಪಿ.ಚಿದಂಬರಂ ಕುಟುಂಬ ಸದಸ್ಯರ ವಿರುದ್ಧ ಕಪ್ಪುಹಣ ನಿಗ್ರಹ ಕಾಯ್ದೆ ಅಡಿ ಮೇ 11ರಂದು ಆದಾಯ ತೆರಿಗೆ ಇಲಾಖೆ ನಾಲ್ಕು ಆರೋಪಪಟ್ಟಿ ಸಲ್ಲಿಸಿತ್ತು. ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಸೊಸೆ ಶ್ರೀನಿಧಿ ಅವರು ವಿದೇಶಗಳಲ್ಲಿ ಹೊಂದಿರುವ ಆಸ್ತಿ ಮತ್ತು ಹೂಡಿಕೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ ಎಂದು ಇಲಾಖೆ ಆರೋಪಿಸಿತ್ತು. ಕಪ್ಪುಹಣ ನಿಗ್ರಹ ಮತ್ತು 2015ರ ತೆರಿಗೆ ಕಾಯ್ದೆಯ ಸೆಕ್ಷನ್‌ 50ರ ಅಡಿ ಈ ಮೂವರ ವಿರುದ್ಧ ಇಲಾಖೆ ದೂರು ದಾಖಲಿಸಿತ್ತು.

ಆದಾಯ ತೆರಿಗೆ ಇಲಾಖೆಯ ವಿಚಾರಣೆಯನ್ನು ಕೈಬಿಡುವಂತೆ ಚಿದಂಬರಂ ಅವರ ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾ ಮಾಡಿದ ನ್ಯಾಯಾಧೀಶ ಎಸ್. ಭಾಸ್ಕರನ್, ಜುಲೈ 5 ಕ್ಕೆ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.