ADVERTISEMENT

ಐಎಸಿ ಸಂಘಟನೆಯ ಸದಸ್ಯರ ಮೇಲೆ ಸಲ್ಮಾನ್ ಕ್ಷೇತ್ರದಲ್ಲಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 12:15 IST
Last Updated 18 ಅಕ್ಟೋಬರ್ 2012, 12:15 IST

ಫರೂಕಾಬಾದ್ (ಪಿಟಿಐ): ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಒಡೆತನದ ಟ್ರಸ್ಟ್ ನಡೆಸಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಭ್ರಷ್ಟಾಚಾರ ವಿರುದ್ಧದ ಭಾರತ (ಐಎಸಿ)ಸಂಘಟನೆಯ ಸದಸ್ಯರು ಹಾಗೂ ದೆಹಲಿ ಮೂಲದ ಪತ್ರಕರ್ತರೊಬ್ಬರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಗುರುವಾರ ಮಧ್ಯಾಹ್ನ ಸಲ್ಮಾನ್ ಖುರ್ಷಿದ್ ಅವರ ಕ್ಷೇತ್ರ ಫರೂಕಾಬಾದ್‌ನಲ್ಲಿ ನಡೆದಿದೆ.

ದೆಹಲಿ ಮೂಲದ ಪತ್ರಕರ್ತರಾದ ಅಭಿನಂದನ್ ಮಿಶ್ರಾ ಹಾಗೂ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಸ್ಥಳಿಯ ಮುಖಂಡ ಲಕ್ಷ್ಮಣ್ ಸಿಂಗ್ ಹಾಗೂ ಸಂಘಟನೆಯ ಇತರ ಸದಸ್ಯರು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಸೇರಿದ ಪ್ರತಿಷ್ಠಾನವು ನಡೆಸಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆಸಿ ಅವರ ಹುಟ್ಟೂರಾದ ಪಿಟಾವುರಾದಿಂದ ವಾಪಾಸಾಗುತ್ತಿದ್ದ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಿ ಹಲ್ಲೆ ನಡೆಸಿದರೆಂದು ಮೂಲಗಳು ತಿಳಿಸಿವೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅವರು ಲಿಖಿತ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.