ADVERTISEMENT

ಐಐಟಿ- ಜೆಇಇ ಪ್ರವೇಶ ಪರೀಕ್ಷೆ: ಅರ್ಪಿತ್ ಮೊದಲಿಗ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST
ಐಐಟಿ- ಜೆಇಇ ಪ್ರವೇಶ ಪರೀಕ್ಷೆ: ಅರ್ಪಿತ್ ಮೊದಲಿಗ
ಐಐಟಿ- ಜೆಇಇ ಪ್ರವೇಶ ಪರೀಕ್ಷೆ: ಅರ್ಪಿತ್ ಮೊದಲಿಗ   

ನವದೆಹಲಿ (ಪಿಟಿಐ): ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿನ (ಐಐಟಿ) ಪ್ರವೇಶಾತಿಗಾಗಿನ ಐಐಟಿ- ಜೆಇಇ ಜಂಟಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೆಹಲಿಯ ಅರ್ಪಿತ್ ಅಗರ್‌ವಾಲ್ ಮೊದಲಿಗರಾಗಿ ತೇರ್ಗಡೆಯಾಗಿದ್ದಾರೆ.

ಏಪ್ರಿಲ್ 8ರಂದು ನಡೆದಿದ್ದ ಪರೀಕ್ಷೆಗೆ ರಾಷ್ಟ್ರದ 4,79,651 ವಿದ್ಯಾರ್ಥಿಗಳು ಹಾಜರಾಗಿದ್ದರು.
ವಿವಿಧ ವಿಭಾಗಗಳಲ್ಲಿನ 24,112 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದು, ಇವರಲ್ಲಿ 19,426 ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಕರೆಯಲಾಗುವುದು. ಒಟ್ಟು ಲಭ್ಯವಿರುವ ಸೀಟುಗಳ ಸಂಖ್ಯೆ 9,647 ಎಂದು ಜೆಇಇ ಅಧ್ಯಕ್ಷ ಜಿ.ಡಿ.ರೆಡ್ಡಿ ತಿಳಿಸಿದ್ದಾರೆ.

ಈಗ ಕೌನ್ಸೆಲಿಂಗ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗಾಗಿ ಶುಕ್ರವಾರದಿಂದಲೇ ಅಂತರಜಾಲ ವ್ಯವಸ್ಥೆಯನ್ನು ಆರಂಭಿಸಲಾಗುವುದು. ಆಕಾಂಕ್ಷಿಗಳು ಜೂನ್ 10ರ ಸಂಜೆ 5 ಗಂಟೆಯ ಒಳಗೆ ತಾವು ವ್ಯಾಸಂಗ ಮಾಡಲು ಬಯಸಲು ಕೋರ್ಸ್ ಹೆಸರನ್ನು ನಮೂದಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಈ ಪರೀಕ್ಷೆ ಬರೆದವರಿಗೆ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಪುನರ್ ಮೌಲ್ಯಮಾಪನಕ್ಕೆ ಆನ್‌ಲೈನ್‌ನಲ್ಲೇ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ಪದ್ಧತಿ ಅಳವಡಿಸಿಕೊಳ್ಳಲಾಯಿತು ಎಂದರು.

ಪ್ರಸಕ್ತ ವರ್ಷ ಪ್ರವೇಶ ಪರೀಕ್ಷೆ ಬರೆದಿದ್ದ 1,50,431 ವಿದ್ಯಾರ್ಥಿನಿಯರಲ್ಲಿ 2886 ವಿದ್ಯಾರ್ಥಿನಿಯರು ರ‌್ಯಾಂಕ್ ಪಡೆದಿದ್ದು, ಅದರಲ್ಲಿ 1908 ವಿದ್ಯಾರ್ಥಿನಿಯರು ಕೌನ್ಸೆಲಿಂಗ್ ಪಟ್ಟಿಯಲ್ಲಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳು, ರಾಷ್ಟ್ರದ ವಿವಿಧೆಡೆ ಇರುವ ಐಐಟಿಗಳು, ಐಟಿ- ಬಿಎಚ್‌ಯು, ವಾರಾಣಸಿ ಅಥಾ ಐಎಸ್‌ಎಂ ಧನ್‌ಬಾದ್‌ನಲ್ಲಿ ಪ್ರವೇಶ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.