ADVERTISEMENT

ಐಐಟಿ ಪ್ರವೇಶ ಪರೀಕ್ಷೆ ಪಾಸಾದ 13ರ ಪೋರ !

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:30 IST
Last Updated 22 ಜೂನ್ 2013, 12:30 IST

ಪಟ್ನಾ (ಐಎಎನ್‌ಎಸ್): ಪ್ರಸಕ್ತ ಸಾಲಿನಲ್ಲಿ ನಡೆದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಬಿಹಾರದ ಸತ್ಯಂ ಕುಮಾರ್ ಎಂಬ 13 ವರ್ಷದ ಪೋರ ಯಶಸ್ಸು ಗಳಿಸಿದ್ದಾನೆ. ರೈತನ ಮಗನಾಗಿರುವ ಸತ್ಯಂ ಕುಮಾರ 150,000 ಅಭ್ಯರ್ಥಿಗಳು ಹಾಜರಾಗಿದ್ದ ಪರೀಕ್ಷೆಯಲ್ಲಿ ಈ ಅಸಾಮಾನ್ಯ ಸಾಧನೆ ಮೆರೆದಿದ್ದಾನೆ.

ಅಖಿಲ ಭಾರತ ಮಟ್ಟದಲ್ಲಿ 679ನೇ ರ‍್ಯಾಂಕ್ ಗಳಿಸಿರುವ ಸತ್ಯಂ ಕುಮಾರ್ ಕಳೆದ ವರ್ಷ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ್ದಾನೆ.

`ಈ ವಯಸ್ಸಿನಲ್ಲಿ ಆತ ಮಾಡಿರುವ ವಿಶೇಷ ಸಾಧನೆ ಕಂಡು ನಮಗೆ ತುಂಬ ಹೆಮ್ಮೆ ಎನಿಸುತ್ತದೆ' ಎಂದು ಸತ್ಯಂ ತಂದೆ ರೈತರಾಗಿರುವ ಸಿದ್ಧನಾಥ್ ಸಿಂಗ್ ಹೇಳಿದರು.

ಐಐಟಿ ಪ್ರವೇಶಕ್ಕಾಗಿ ನಡೆದ ಪರೀಕ್ಷೆಗಳ ಫಲಿತಾಂಶವು ಶುಕ್ರವಾರ ಪ್ರಕಟವಾಗಿವೆ. `ಸದ್ಯ, ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಕಿರಿಯ ವಯಸ್ಸಿನವನಾಗಿ ಇಂತಹ ಸಾಧನೆ ಮಾಡಿರುವವರಲ್ಲಿ ಸತ್ಯಂ ಮೊದಲಿಗನಾಗಿದ್ದಾನೆ' ಎಂದು ಐಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಭೋಜಪುರ್ ಜಿಲ್ಲೆಯ ಬಖೋರಪುರ್ ಗ್ರಾಮದ ನಿವಾಸಿಯಾಗಿರುವ ಸತ್ಯಂ ಕಳೆದ ವರ್ಷ ತನ್ನ ಹನ್ನೆರಡುವರೆ ವಯಸ್ಸಿನಲ್ಲಿ ಐಐಟಿ ಪ್ರವೇಶ ಪರೀಕ್ಷೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಗಿದ್ದ. ನಂತರ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಿಂದ (ಸಿಬಿಎಸ್‌ಇ) ವಿಶೇಷ ಅನುಮತಿ ಪಡೆದಿದ್ದ ಸತ್ಯಂ ಅಖಿಲ ಭಾರತ ಮಟ್ಟದಲ್ಲಿ 8,137ನೇ ರ‍್ಯಾಂಕ್ ಗಳಿಸಿದ್ದ. ಆದರೆ ಕಡಿಮೆ ರ‍್ಯಾಂಕ್ ಗಳಿಕೆಯಿಂದ ತೃಪ್ತನಾಗದ ಸತ್ಯಂ ಮತ್ತೆ ಈ ಬಾರಿ ನಡೆದ ಪರೀಕ್ಷೆ ಹಾಜರಾಗಿ 679ನೇ ರ‍್ಯಾಂಕ್ ಗಳಿಸಿದ್ದಾನೆ.

ಸತ್ಯಂ ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ತನ್ನ ರ‍್ಯಾಂಕ್ ಅನ್ನು ಉತ್ತಮಪಡಿಸಿಕೊಂಡಿದ್ದಾನೆ ಎಂದು ಸಿದ್ಧನಾಥ್ ಸಿಂಗ್ ತಿಳಿಸಿದರು.

ಈ ಸಾಧನೆ ಮಾಡಿರುವ ಸತ್ಯಂ ಕುಮಾರ ತನ್ನದೆ ಆದ ಸಾಪ್ಟ್‌ವೇರ್ ಕಂಪೆನಿಯೊಂದನ್ನು ಸ್ಥಾಪಿಸುವ ಬಯಕೆ ವ್ಯಕ್ತಪಡಿಸುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.