ನವದೆಹಲಿ (ಪಿಟಿಐ/ ಐಎಎನ್‌ಎಸ್): ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆಗಳು ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
ಏಪ್ರಿಲ್ 4ರಂದು ಆರಂಭವಾಗಿ ಮೇ 10ರಂದು ಪೂರ್ಣಗೊಳ್ಳುವ ಚುನಾವಣೆಗಳಲ್ಲಿ ಐದು ರಾಜ್ಯಗಳ 14.39 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಐದೂ ರಾಜ್ಯಗಳ ಚುನಾವಣೆಗಳ ಮತ ಎಣಿಕೆಯು ಮೇ 13ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ವರದಿಗಾರರಿಗೆ ತಿಳಿಸಿದರು.
ಪಶ್ಚಿಮಬಂಗಾಳದಲ್ಲಿ ಆರು ಹಂತಗಳಲ್ಲಿ, ಅಸ್ಸಾಂನಲ್ಲಿ ಎರಡು ಹಂತಗಳಲ್ಲಿ ಹಾಗೂ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದು ದಿನದ ಮತದಾನ ನಡೆಯಲಿದ್ದು 2009ರ ಲೋಕಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಚುನಾವಣೆ ಆಗಿದೆ.
ಎಡಪಕ್ಷಗಳು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಅಸ್ಸಾಂ ಗಣ ಪರಿಷತ್, ಡಿಎಂಕೆ, ಎಐಎಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳು ಈ ಚುನಾವಣೆಗಳಲ್ಲಿ ಸೆಣಸಲಿವೆ.
ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆಯು ಜಾರಿಗೆ ಬರಲಿದೆ ಎಂದು ವೇಳಾಪಟ್ಟಿ ಪ್ರಕಟಿಸಿದ ಖುರೇಷಿ ನುಡಿದರು.
ಪಶ್ಚಿಮಬಂಗಾಳವು 294 ವಿಧಾನಸಭೆ ಕ್ಷೇತ್ರಗಳನ್ನು, ತಮಿಳುನಾಡು 234, ಕೇರಳ 140, ಪುದುಚೇರಿ 30 ಮತ್ತು ಅಸ್ಸಾಂ 126 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿವೆ.
ಪಶ್ಚಿಮಬಂಗಾಳ ಅತಿ ಹೆಚ್ಚು ಸಂಖ್ಯೆಯ- 5.60 ಕೋಟಿ ಮತದಾರರನ್ನು ಹೊಂದಿದ್ದರೆ, ತಮಿಳುನಾಡಿನಲ್ಲಿ ಅತಿ ಕಡಿಮೆ- 4.59 ಕೋಟಿ ಮತದಾರರನ್ನು ಹೊಂದಿದೆ.
ಕೇರಳ- 2.29 ಕೋಟಿ ಮತದಾರರು, ಅಸ್ಸಾಂ- 1.81 ಕೋಟಿ ಮತ್ತು ಪುದುಚೇರಿ- ಕೇವಲ 8 ಲಕ್ಷ ಮತದಾರರನ್ನು ಹೊಂದಿದ್ದು ಮತದಾನ ಎಲೆಕ್ಟ್ರಾನಿಕ್ ಮತ ಯಂತ್ರದ ಮೂಲಕ ನಡೆಯಲಿದೆ.
ಪಶ್ಚಿಮಬಂಗಾಳದಲ್ಲಿ ‘ವಸ್ತು ಸ್ಥಿತಿಯನ್ನು’ ಆಧರಿಸಿ ಆರು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದೆ. ಆಯೋಗವು ಈಗಾಗಲೇ ಅಲ್ಲಿನ ಕಾನೂನು ಸುವ್ಯವಸ್ಥೆ ಪರಿಶೀಲನೆಗೆ ಎರಡು ತಂಡಗಳನ್ನು ಕಳುಹಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಲದ ಚುನಾವಣೆಯಲ್ಲಿ ವಿದೇಶದಲ್ಲಿರುವ ಭಾರತೀಯರೂ ಖುದ್ದಾಗಿ ಮತದಾನ ಮಾಡಬಹುದಾಗಿದೆ. ಇದಕ್ಕಾಗಿ ಸೂಚನೆಗಳನ್ನು ಚುನಾ ವಣಾಧಿಕಾರಿಗಳಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.