ADVERTISEMENT

ಐದು ವಿಚಾರಗಳ ಚರ್ಚೆಗೆ ಭಾರತ ಸದಾ ಸಿದ್ಧ

ಪಾಕಿಸ್ತಾನ ಜತೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:35 IST
Last Updated 18 ಆಗಸ್ಟ್ 2016, 19:35 IST
ಕಳೆದ ಕೆಲ ವಾರಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಶ್ರೀನಗರದಲ್ಲಿ ಭದ್ರತಾ ಪಡೆಗಳಿಂದ ದೌರ್ಜನ್ಯಕ್ಕೊಳಗಾದ ಯುವಕ ತನ್ನ ಗಾಯಗಳನ್ನು ತೋರಿಸಿದನು
ಕಳೆದ ಕೆಲ ವಾರಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಶ್ರೀನಗರದಲ್ಲಿ ಭದ್ರತಾ ಪಡೆಗಳಿಂದ ದೌರ್ಜನ್ಯಕ್ಕೊಳಗಾದ ಯುವಕ ತನ್ನ ಗಾಯಗಳನ್ನು ತೋರಿಸಿದನು   

ನವದೆಹಲಿ (ಪಿಟಿಐ): ಪಾಕಿಸ್ತಾನದ ಜತೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಸುವುದು ಪಾಕಿಸ್ತಾನದ ನಿಲುವನ್ನು ಅವಲಂಬಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರದ ಭಾಗಗಳ ಅಕ್ರಮ ಸ್ವಾಧೀನ ತೆರವು ಮತ್ತು ಭಯೋತ್ಪಾದನಾ ಶಿಬಿರಗಳ ಮುಚ್ಚುಗಡೆಗೆ ಸಂಬಂಧಿಸಿ ಚರ್ಚೆ ನಡೆಸಲು ಭಾರತ ಯಾವಾಗಲೂ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರದ ಬಗ್ಗೆ ಮಾತುಕತೆ ನಡೆಸಬೇಕು ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಎಜಾಜ್‌ ಅಹ್ಮದ್‌ ಚೌಧರಿ ಅವರ ಆಹ್ವಾನಕ್ಕೆ ಜೈಶಂಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಲ್ಲಿಸುವುದು ಮತ್ತು ಕಣಿವೆಯಲ್ಲಿ ಹಿಂಸೆ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಕೊನೆಗೊಳಿಸುವುದೇ ಮಾತುಕತೆಯ ಮುಖ್ಯ ಅಂಶಗಳು ಎಂದು ಜೈಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕರು ಎಂದು ಗುರುತಿಸಲಾದ ವ್ಯಕ್ತಿಗಳು ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂಥವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವುದು ಕೂಡ ಮಾತುಕತೆಯ ವಿಷಯವಾಗಬೇಕು. ಹಾಗೆಯೇ ಉಗ್ರರ ತರಬೇತಿ ಶಿಬಿರಗಳನ್ನು ಮುಚ್ಚಿಸುವ ವಿಚಾರವೂ ಚರ್ಚೆಯಾಗಬೇಕು ಎಂದು ಪಾಕಿಸ್ತಾನಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ ಎಂದು ವಿದೇಶಾಂಗ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ.

ಭಾರತದ ಭಾಗವಾಗಿರುವ ಜಮ್ಮು ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ. ಅದನ್ನು ಆದಷ್ಟು ಬೇಗ ತೆರವುಗೊಳಿಸುವುದನ್ನು ಎದುರು ನೋಡುತ್ತಿರುವುದಾಗಿಯೂ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಜೈಶಂಕರ್‌ ಹೇಳಿದ್ದಾರೆ.

ಹಫೀಜ್‌ ದೂರವಿರಿಸಿ (ಲಖನೌ ವರದಿ):  ಮುಂಬೈ ದಾಳಿಯ ಸಂಚುಕೋರ ಜಮಾತ್ –ಉದ್ –ದವಾ ಸಂಘಟನೆಯ ಮುಖ್ಯಸ್ಥ  ಹಫೀಜ್ ಸಯೀದ್  ಬೋಧನೆಯನ್ನು ಕೇಳ ಬಾರದು ಎಂದು ಪ್ರಮುಖ ಇಸ್ಲಾಂ ಪ್ರಚಾರ ಮಂಡಳಿಯು ಫತ್ವಾ ಹೊರಡಿಸಿದೆ.

ಹಫೀಜ್ ಸಯೀದ್‌ನಂತಹ ವ್ಯಕ್ತಿಗಳನ್ನು ನಿರ್ಲಕ್ಷಿಸಿ ಇಸ್ಲಾಂ ಧರ್ಮದಿಂದ  ದೂರವಿಡಬೇಕು ಎಂದು ಬರೈಲಿ ಮೂಲದ ದರ್ಗಾ ಅಲಾ ಹಜರತ್ ಧರ್ಮ ಪ್ರಚಾರಕ ಸಂಸ್ಥೆಯು ಹೇಳಿದೆ.

‘ಮೋದಿ ಅವರದು ಎಲ್ಲೆ ಮೀರಿದ  ಹೇಳಿಕೆ’
ಇಸ್ಲಾಮಾಬಾದ್‌ (ಪಿಟಿಐ): ‘
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮರೆಮಾಚುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ತಾನ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ಪಾಕ್‌ ಆರೋಪಿಸಿದೆ.

‘ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದಲ್ಲಿ  ಬಲೂಚಿಸ್ತಾನದ ವಿಷಯ ಪ್ರಸ್ತಾಪಿಸುವ ಮೂಲಕ ಮೋದಿ ತಮ್ಮ ಎಲ್ಲೆಯನ್ನು ಮೀರಿದ್ದಾರೆ’ ಎಂದು ಪಾಕಿಸ್ತಾನ  ವಿದೇಶಾಂಗ ಇಲಾಖೆ ವಕ್ತಾರ ನಫೀಸ್‌ ಜಕಾರಿಯಾ ದೂರಿದ್ದಾರೆ.

ಗುರುವಾರ ಸಂದರ್ಶನವೊಂದರಲ್ಲಿ  ಮಾತನಾಡಿರುವ ಜಕಾರಿಯಾ ಅವರು, ಬಲೂಚಿಸ್ತಾನದ ಪರ ಮೋದಿ ಅವರ ಹೇಳಿಕೆಯು ಮುಂದಿನ ತಿಂಗಳು ನಡೆಯುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಾಶ್ಮೀರದ ವಿಷಯ  ವನ್ನು ಪ್ರಸ್ತಾಪಿಸುವಂತೆ  ಮಾಡಿದೆ ಎಂದು ಹೇಳಿದ್ದಾರೆ. 
‘ಅಲ್ಲದೇ ಬಲೂಚಿಸ್ತಾನ ವಿಷಯ ಪ್ರಸ್ತಾಪಿಸುವ ಮೂಲಕ  ಮೋದಿ ಅವರು ವಿಶ್ವಸಂಸ್ಥೆಯ ಘೋಷಣೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಜಕಾರಿಯಾ ಆರೋಪಿಸಿದ್ದಾರೆ. ಈ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ   ಪ್ರಧಾನಿ ನವಾಜ್‌ ಷರೀಫ್‌ ನೇತೃತ್ವದ ಪಾಕ್‌ ನಿಯೋಗವು ದೂರು ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತದ ಚರ್ಚೆಯ ವಿಷಯಗಳು
* ಗಡಿಯಾಚೆಗಿನ ಭಯೋತ್ಪಾದನೆ
* ಪಾಕಿಸ್ತಾನ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿರುವ ಜಮ್ಮು ಕಾಶ್ಮೀರದ ಭಾಗಗಳ ತೆರವು
* ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಶಿಬಿರಗಳ ಮುಚ್ಚುಗಡೆ
* ಅಂತರರಾಷ್ಟ್ರೀಯ ಮಟ್ಟದಲ್ಲಿ ಉಗ್ರರು ಎಂದು ಗುರುತಿಸಲಾದವರ ಬಂಧನ ಮತ್ತು ವಿಚಾರಣೆ
* ಮುಂಬೈ  ಮತ್ತು ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ

** ಚೆಂಡು ಈಗ ಪಾಕಿಸ್ತಾನದ ಅಂಗಣದಲ್ಲಿದೆ. ಅವರು ಮಾತುಕತೆಗೆ ಆಹ್ವಾನ ನೀಡಿದ್ದರು. ಆ ಆಹ್ವಾನಕ್ಕೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಈಗ ಅವರು ನಿರ್ಧರಿಸಬೇಕಿದೆ
-ವಿಕಾಸ್‌ ಸ್ವರೂಪ್‌, ವಿದೇಶಾಂಗ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT