ADVERTISEMENT

ಒಂದೇ ವರ್ಷದಲ್ಲಿ ಚಹಾಗೆ ₹3 ಕೋಟಿ

ಏಜೆನ್ಸೀಸ್
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ದೇವೇಂದ್ರ ಫಡಣವೀಸ್‌ (ಸಂಗ್ರಹ ಚಿತ್ರ)
ದೇವೇಂದ್ರ ಫಡಣವೀಸ್‌ (ಸಂಗ್ರಹ ಚಿತ್ರ)   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಕಳೆದ ವರ್ಷ ಚಹಾ ಮತ್ತು ಉಪಾಹಾರಕ್ಕೆ ಮಾಡಿರುವ ವೆಚ್ಚ ಬರೋಬ್ಬರಿ ₹3.34 ಕೋಟಿ!

ಮಾಹಿತಿ ಹಕ್ಕು ಕಾಯ್ದೆ ಮೂಲಕ ಈ ಕುರಿತು ಪಡೆದಿರುವ ವಿವರಗಳನ್ನು ಮುಂಬೈ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಂಜಯ್‌ ನಿರುಪಮ್‌ ಬಹಿರಂಗಪಡಿಸಿದ್ದಾರೆ.

‘ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕಚೇರಿಯಲ್ಲಿ ಪ್ರತಿ ದಿನ 18,591 ಕಪ್‌ ಚಹಾ ವಿತರಿಸಲಾಗಿದೆ. ನಾವು ವಿವಿಧ ರುಚಿಗಳನ್ನು ಹೊಂದಿರುವ ಚಹಾ ಹೆಸರು ಕೇಳಿದ್ದೇವೆ. ಆದರೆ, ಫಡಣವೀಸ್‌ ಅವರು ಚಿನ್ನದಿಂದ ತಯಾರಿಸಿದ ಚಹಾ ಸೇವಿಸುತ್ತಿರಬಹುದು. ಮಹಾರಾಷ್ಟ್ರದಲ್ಲಿ ರೈತರು ಪ್ರತಿ ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಈ ರೀತಿ ಅನಗತ್ಯ ವೆಚ್ಚ ಮಾಡುತ್ತಿರುವುದು ಖಂಡನೀಯ’ ಎಂದಿದ್ದಾರೆ.

ADVERTISEMENT

ಲಾಲುಗೆ ಅನಾರೋಗ್ಯ: ಏಮ್ಸ್‌ಗೆ ಸ್ಥಳಾಂತರ
ಪಟ್ನಾ: ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ರಿಮ್ಸ್‌) ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ಸ್ಥಳಾಂತರಿಸಲಾಗಿದೆ.

ಲಾಡು ತಯಾರಿಕೆ ಕೇಂದ್ರದಲ್ಲಿ ಬೆಂಕಿ
ಹೈದರಾಬಾದ್‌:
ತಿರುಮಲದ ಮುಖ್ಯ ದೇವಾಲಯದ ಹೊರಗಿರುವ ಲಾಡು ತಯಾರಿಕೆ ಘಟಕದಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದೆ.

‘ಲಾಡುಗಾಗಿ ಬೂಂದಿ ಕಾಳು ತಯಾರಿಸುವ ಘಟಕದಲ್ಲಿ ಅವಘಡ ಸಂಭವಿಸಿತ್ತು. ಈ ಘಟಕದಲ್ಲಿ ತುಪ್ಪದ ಪಾತ್ರೆಗಳಿದ್ದವು. ಶಾರ್ಟ್‌ ಸರ್ಕೀಟ್‌ನಿಂದ ಈ ಘಟನೆ ಸಂಭವಿಸಿರಬಹುದು’ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

‘ತಕ್ಷಣವೇ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ 30 ನಿಮಿಷಗಳಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದರು. ಘಟನೆಯಿಂದಾಗಿ ಕೆಲ ಕಾಲ ಬೂಂದಿ ತಯಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಹೇಳಿದ್ದಾರೆ.

ಉಗ್ರ ಸಂಘಟನೆ ಸೇರಿದ ಯುವಕ
ಶ್ರೀನಗರ:
ನಾಪತ್ತೆಯಾಗಿರುವ ಮಗ ಮುಷ್ತಾಕ್ ವಾಜಾ (18) ಲಷ್ಕರ್–ಎ–ತಯ್ಯಿಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎಂದು ಶಂಕಿಸಿರುವ ಪೋಷಕರು, ಮರಳಿ ಬರುವಂತೆ ಅವನಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.