ADVERTISEMENT

ಒಂಬತ್ತು ಸಿಮಾಂಧ್ರ ಸಂಸದರ ಅಮಾನತು

ತೆಲಂಗಾಣ ವಿವಾದ: ಲೋಕಸಭೆಯಲ್ಲಿ ಭಾರಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸಂಸತ್ತಿನ ಕಲಾಪಕ್ಕೆ ಪದೇ ಪದೇ ಅಡ್ಡಿಯುಂಟು ಮಾಡಿದ ಆಂಧ್ರಪ್ರದೇಶದ ಒಂಬತ್ತು ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ತೆಲುಗು ದೇಶಂ ಪಕ್ಷದ ಸಂಸದರಾದ ನಿಮಲ್ಲ ಕೃಷ್ಟಪ್ಪ, ಮೋದುಗುಲ ವೇಣುಗೋಪಾಲ ರೆಡ್ಡಿ, ಕೋನಕಲ್ಲ ನಾರಾಯಣ ರಾವ್ ಹಾಗೂ ನಿರ್ಮಲಲ್ಲಿ ಶಿವಪ್ರಸಾದ್ ಹಾಗೂ ಕಾಂಗ್ರೆಸ್ ಸಂಸದರಾದ ಸಾವರ್ಸಿ ಎ. ಸಾಯಿಪ್ರತಾಪ್, ಅನಂತ ವೆಂಕಟರಾಮಿ ರೆಡ್ಡಿ, ಎಲ್.ರಾಜಗೋಪಾಲ್, ಮಾಗುಂಟ ಶ್ರೀನಿವಾಸಲು ರೆಡ್ಡಿ ಹಾಗೂ ಬಾಪಿ ರಾಜು ಕಾನುಮೂರು ಅವರನ್ನು ಐದು ದಿನಗಳ ಮಟ್ಟಿಗೆ ಅಮಾನತುಗೊಳಿಸಿ ಸ್ಪೀಕರ್ ಮೀರಾ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸಂಸದೀಯ ನಡಾವಳಿ ನಿಯಮ 374 (ಎ) ಪ್ರಕಾರ ಸಂಸದರನ್ನು ಕಲಾಪದಿಂದ ಅಮಾನತುಪಡಿಸುವ ಅವಕಾಶವಿದೆ. ಇದರಂತೆ ಸ್ಪೀಕರ್ ಮೀರಾ ಕುಮಾರ್ ಒಂಬತ್ತು ಸಂಸದರನ್ನು ಐದು ದಿನಗಳ ಕಲಾಪದಿಂದ ಅಮಾನತುಗೊಳಿಸಿದರು.

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದಾಗ ಈ ಸಂಸದರು ಅಖಂಡ ಆಂಧ್ರಪ್ರದೇಶಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಶಾಂತರಾಗುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಅವರು ಗದ್ದಲ ನಿಲ್ಲಿಸಲಿಲ್ಲ. ಆನಂತರ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಸ್ಪೀಕರ್ ಮುಂದೂಡಿದರು.

ಅಖಂಡ ಆಂಧ್ರಕ್ಕೆ ಒತ್ತಾಯಿಸಿ ಆಗಸ್ಟ್ 23ರಂದು 12 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಇವರಲ್ಲಿ ಈಗ ಅಮಾನತುಗೊಂಡ 9 ಸಂಸದರೂ ಸೇರಿದ್ದರು. ಒಂದೇ ಕಾರಣಕ್ಕೆ ಲೋಕಸಭೆಯಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದು ಮೂರನೇ ಬಾರಿ.

ತೈಲ ಬೆಲೆ ಏರಿಕೆ ವಿರೋಧಿಸಿದ್ದ ಎಡಪಕ್ಷಗಳು ಹಾಗೂ ತೆಲುಗು ದೇಶಂ ಪಕ್ಷದ ಸದಸ್ಯರ ವಿರುದ್ಧ  ಕಾಂಗ್ರೆಸ್ ಸಂಸದರು ಅಸಂಸದೀಯ ಪದಗಳನ್ನು ಉಪಯೋಗಿಸಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಸದನದಲ್ಲಿ ಮಾತನಾಡಿದ್ದರಿಂದ ಕಲಾಪವನ್ನು ಮುಂದೂಡಲಾಗಿತ್ತು.  

ರಾಜ್ಯಸಭೆಯ ಇಬ್ಬರು  ಸದಸ್ಯರ ಅಮಾನತು: ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಯುಂಟು ಮಾಡಿದ  ತೆಲುಗು ದೇಶಂ ಪಕ್ಷದ ಇಬ್ಬರು ಸದಸ್ಯರನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಯಿತು.

ತೈಲಬೆಲೆ ಏರಿಕೆ ವಿರೋಧಿಸಿ ಸದಸ್ಯರು ಕಲಾಪ ನಡೆಯದಂತೆ ಗದ್ದಲ ನಡೆಸಿದ್ದರಿಂದ ರಾಜ್ಯಸಭೆ ಕಲಾಪ 15 ನಿಮಿಷ ಮುಂದೂಡಿ ನಂತರ ಮತ್ತೆ ಆರಂಭವಾದಾಗ ಟಿಡಿಪಿ ಸದಸ್ಯರಾದ ಸಿ.ಎಂ.ರಮೇಶ್ ಹಾಗೂ ವೈ.ಆರ್.ಚೌಧರಿ ಸಭಾಧ್ಯಕ್ಷರ ಪೀಠದ ಮುಂದಿನ ಜಾಗಕ್ಕೆ ನುಗ್ಗಿ ಗದ್ದಲ ನಡೆಸಿದರು.

ಈ ವೇಳೆ ಉಪಸಭಾಪತಿ ಪಿ.ಜೆ. ಕುರಿಯನ್, ಸಂಸದರನ್ನು ಸಮಾಧಾನಪಡಿಸಿ ಮುಂದೆ ಮಾತನಾಡಲು ಅವಕಾಶ ನೀಡಲಾಗುವುದು. ಆದ್ದರಿಂದ ತಮ್ಮ ಆಸನದ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು.  

ಆದರೂ ಟಿಡಿಪಿ ಸಂಸದರು ಗದ್ದಲ ನಿಲ್ಲಿಸಲಿಲ್ಲ. ಸದನವನ್ನು 15 ನಿಮಿಷಗಳ ಉಪಸಭಾಪತಿ ಮುಂದೂಡಿದರು. ಆನಂತರವೂ ಸದಸ್ಯರ ಗಲಾಟೆ ಮುಂದುವರಿಸಿದ್ದರಿಂದ ಇಬ್ಬರನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಯಿತು.

ಸಚಿವರ ರಾಜೀನಾಮೆ
ಹೈದರಾಬಾದ್ (ಐಎಎನ್‌ಎಸ್):  ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ ಭಾಗದ ಇಬ್ಬರು ಸಚಿವರು ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಅವರಿಗೆ ಸೋಮವಾರ ರಾಜೀನಾಮೆ ಸಲ್ಲಿಸಿದರು.

ಮೂಲಸೌಕರ್ಯ ಮತ್ತು ಹೂಡಿಕೆ ಸಚಿವ ಜಿ.ಶ್ರೀನಿವಾಸ ರಾವ್ ಹಾಗೂ ಕಾನೂನು ಸಚಿವ ಇ.ಪ್ರತಾಪ್ ರೆಡ್ಡಿ ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಿ ಅಂಗೀಕರಿಸುವಂತೆ ರಾಜ್ಯಪಾಲರನ್ನು ಕೋರಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರಿಗೆ ಕಳುಹಿಸಿ ಕೊಟ್ಟು ಅವರ ಶಿಫಾರಸಿನಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ರಾಜೀನಾಮೆ ನೀಡಿದ ನಂತರ ಮಾತನಾಡಿದ ಸಚಿವರು, ಏಕೀಕೃತ ಆಂಧ್ರ ಪ್ರತಿಭಟನೆಗೆ ಸೇರಿಕೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದರು.

`ರಾಜ್ಯ ವಿಭಜನೆ ವಿರೋಧಿಸಿ ಜನ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಸಚಿವರಾಗಿ ಮುಂದುವರಿಯಲು ಬಯಸುವುದಿಲ್ಲ' ಎಂದು ಶ್ರೀನಿವಾಸ ರಾವ್ ಹೇಳಿದರು. ಸದನದ ಮುಂದೆ ತೆಲಂಗಾಣ ರಾಜ್ಯ ರಚನೆ ನಿರ್ಣಯ ಬಂದಾಗ ವಿರುದ್ಧವಾಗಿ ಮತ ಹಾಕುವುದಾಗಿ ತಿಳಿಸಿದರು. 

ಪಶುಸಂಗೋಪನೆ ಸಚಿವ ಪಿ.ವಿಶ್ವರೂಪ್ ಸಹ ರಾಜೀನಾಮೆ ನೀಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ರಾಜೀನಾಮೆ ನೀಡಲಿಲ್ಲ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಭಾಗದ ಎಂಟು ಸಚಿವರು ಕಳೆದ ತಿಂಗಳು ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದ್ದರು.

ರಾಜ್ಯ ವಿಭಜನೆ ವಿರೋಧಿಸಲು ರಾಜೀನಾಮೆ ಒಂದೇ ಪರಿಹಾರವಲ್ಲ. ಸಚಿವರು ದೆಹಲಿಗೆ ತೆರಳಿ ರಾಜ್ಯ ವಿಭಜನೆ ಮಾಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಕಂದಾಯ ಸಚಿವ ರಘುವೀರ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.