ಭುವನೇಶ್ವರ: ಆಡಳಿತಾರೂಢ ಬಿಜೆಡಿ ಪಕ್ಷದ ಬುಡಕಟ್ಟು ಪ್ರದೇಶದ ಶಾಸಕರೊಬ್ಬರನ್ನು ಶಂಕಿತ ಮಾವೊವಾದಿಗಳು ಶನಿವಾರ ನಸುಕಿನಲ್ಲಿ ಅಪಹರಿಸಿದ್ದಾರೆ.ಇಟಲಿ ಪ್ರಜೆಗಳ ಅಪಹರಣ ಪ್ರಕರಣದಲ್ಲಿ ಮಾವೊವಾದಿಗಳ ಮಧ್ಯವರ್ತಿಗಳೊಂದಿಗೆ ಸಂಧಾನ ನಡೆಸುತ್ತಿರುವಾಗಲೇ ಶಾಸಕರ ಅಪಹರಣ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಬುಡಕಟ್ಟು ಪ್ರದೇಶದ ಲಕ್ಷ್ಮಿಪುರದ ಶಾಸಕ ಜಿನಾ ಹಿಕಾಕ ಅವರನ್ನು ನಸುಕಿನ 1 ಗಂಟೆಗೆ ಸುಮಾರು 50 ಶಸ್ತ್ರಸಜ್ಜಿತರ ತಂಡ ಕೊರಾಪುಟ್ ಜಿಲ್ಲೆಯಲ್ಲಿ ಅಪಹರಿಸಿದೆ.
ರಸ್ತೆ ಅಗೆದು ಕಾರು ತಡೆ: ಕೊರಾಪುಟ್- ಲಕ್ಷ್ಮಿಪುರ ನಡುವಿನ ತೊಯಾಪುಟ್ ಬಳಿ ರಸ್ತೆ ಅಗೆದು, ಟ್ರಕ್ ಅಡ್ಡ ನಿಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಸಕರ ಕಾರು ಅಡ್ಡಗಟ್ಟಿದ ಶಂಕಿತ ನಕ್ಸಲರು ಅವರನ್ನು ಅಪಹರಿಸಿದ್ದಾರೆ ಎಂದು ಕೊರಾಪುಟ್ ಎಸ್.ಪಿ. ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಶಾಸಕರ ಜತೆಗಿದ್ದ ಅಂಗರಕ್ಷಕ ಹಾಗೂ ಚಾಲಕನ ಬಳಿ ಇದ್ದ ಮೊಬೈಲ್‌ಗಳನ್ನು ಕಿತ್ತುಕೊಂಡು ಕಳುಹಿಸಿದ್ದಾರೆ. ನಂತರ ಶಾಸಕರನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದರು.
ಶಾಸಕರ ಅಪಹರಣ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕಂದಾಯ ಸಚಿವ ಎಸ್.ಎನ್.ಪಾತ್ರೊ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿ ಸಚಿವ ಲಾಲ್ ಬಿಹಾರಿ ಹಿಮಿರಿಕಾ ಅವರು ಸ್ಥಳಕ್ಕೆ ಧಾವಿಸಿದರು. ಹಿಂಸೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಕ್ಸಲರಿಗೆ ಮುಖ್ಯಮಂತ್ರಿ ಪಟ್ನಾಯಕ್ ಅವರು ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಸಕರ ಅಪಹರಣ ನಡೆದಿದೆ. ಶಾಸಕರ ಅಪಹರಣದ ಬಗ್ಗೆ ಇದುವರೆಗೆ ಯಾವುದೇ ಗುಂಪು ಅಥವಾ ವ್ಯಕ್ತಿಗಳು ಹೊಣೆ ಹೊತ್ತುಕೊಂಡಿಲ್ಲ.
ವಿಧಾನ ಸಭೆಯಲ್ಲಿ ಹೇಳಿಕೆ: ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸಿರುವ ಸಿಎಂ ಪಟ್ನಾಯಕ್, ಅಪಹರಣ ಕುರಿತು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಇಟಲಿ ಪ್ರಜೆಗಳ ಅಪಹರಣ ಕುರಿತು ಮಾವೊಗಳು ಸೂಚಿಸಿರುವ ಮಧ್ಯವರ್ತಿಗಳೊಂದಿಗೆ ಸಂಧಾನ ಮುಂದುವರಿದಿದ್ದು, ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾತುಕತೆ ಮುಂದಕ್ಕೆ: ಕೊರಪುಟ್ ಜಿಲ್ಲೆಯಲ್ಲಿ ಶಾಸಕ ಹಿಕಾಕ ಅವರ ಅಪಹರಣದ ಹಿನ್ನೆಲೆಯಲ್ಲಿ ಇಟಲಿ ಪ್ರಜೆಗಳ ಅಪಹರಣಕ್ಕೆ ಸಂಬಂಧಿಸಿದಂತೆ ಮಾವೊವಾದಿಗಳು ಸೂಚಿಸಿದ ಮಧ್ಯವರ್ತಿಗಳು ಹಾಗೂ ಸರ್ಕಾರದ ನಡುವೆ ನಡೆಯುತ್ತಿದ್ದ ಸಂಧಾನ ಮಾತುಕತೆ ಮುಂದೂಡಲಾಗಿದೆ ಎಂದು ಮಧ್ಯವರ್ತಿಗಳು ತಿಳಿಸಿದ್ದಾರೆ.
ಪತ್ನಿ ಮನವಿ: ಬುಡಕಟ್ಟು ಜನರ ಅಭಿವೃದ್ಧಿಗಾಗಿ ಹಿಕಾಕ ಅವರು ಶ್ರಮಿಸುತ್ತಿದ್ದು, ಯಾವುದೇ ಅಪಾಯ ಮಾಡದೆ ಅವರನ್ನು ಬಿಟ್ಟು ಬಿಡುವಂತೆ ಪತ್ನಿ ಕೌಶಲ್ಯ ಅಪಹರಣಕಾರರಿಗೆ ಮನವಿ ಮಾಡಿದ್ದಾರೆ.
ಭರವಸೆ: ಶಂಕಿತ ನಕ್ಸಲರಿಂದ ಅಪಹರಣಕ್ಕೆ ಒಳಗಾಗಿರುವ ಬುಡಕಟ್ಟು ಪ್ರದೇಶದ ಶಾಸಕ ಹಿಕಾಕ ಅವರನ್ನು ಬಿಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ ಎಂದು ಹಿಕಾಕ ಪತ್ನಿ ಕೌಶಲ್ಯ ಅವರಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭರವಸೆ ನೀಡಿದ್ದಾರೆ.
ಚಿದಂಬರಂಗೆ ಮಾಹಿತಿ: ಶಾಸಕರ ಅಪಹರಣ ಕುರಿತು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ನವೀನ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸಲು ಅಗತ್ಯ ಇರುವ ನೆರವು ನೀಡುವುದಾಗಿ ಗೃಹ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು ಎನ್ನಲಾಗಿದೆ.
ಆಂತರಿಕ ಸಂಘರ್ಷ ಕಾರಣ ?
ಭುವನೇಶ್ವರ: ಮಾವೊವಾದಿಗಳ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಇಟಲಿ ಪ್ರಜೆಗಳ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರದ ಜತೆಗೆ ನಡೆಯುತ್ತಿರುವ ಸಂಧಾನವನ್ನು ವಿಫಲಗೊಳಿಸುವ ಕಾರಣಕ್ಕಾಗಿಯೇ ಛತ್ತೀಸ್‌ಗಡ ಇಲ್ಲವೇ ಆಂಧ್ರದ ನಕ್ಸಲರು ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಮಾವೊವಾದಿಗಳ ಒಡಿಶಾ ಸಂಘಟನೆ ಮುಖ್ಯಸ್ಥ ಸವ್ಯಸಾಚಿ ಪಾಂಡ ಅವರು ಇಬ್ಬರು ಇಟಲಿ ಪ್ರಜೆಗಳನ್ನು ಅಪಹರಿಸುವ ಮುನ್ನ ಸಂಘಟನೆಯ ಕೇಂದ್ರ ಸಮಿತಿಯ ಒಪ್ಪಿಗೆ ಪಡೆದಿರಲಿಲ್ಲ ಎನ್ನಲಾಗಿದೆ. ಇದರಿಂದ ಸಂಘಟನೆಯ ಛತ್ತೀಸ್‌ಗಡ ಮತ್ತು ಆಂಧ್ರದ ಮುಖಂಡರು ಅಸಮಾಧಾನಗೊಂಡಿದ್ದು, ಸರ್ಕಾರದ ಜತೆ ಮಾತುಕತೆ ಬದಲಾಗಿ ಹಿಂಸಾ ಮಾರ್ಗ ಅನುಸರಿಸಲು ಬಯಸಿದ್ದಾರೆ.
ಈ ಕಾರಣಕ್ಕಾಗಿಯೇ ಸಂಧಾನ ಮಾತುಕತೆ ವಿಫಲಗೊಳಿಸುವ ಯತ್ನವಾಗಿ ಶಾಸಕರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. ಮಾವೊವಾದಿ ಸಂಘಟನೆಯ ಶ್ರೀಕಾಕುಳಂ- ಕೊರಪುಟ್ ವಿಭಾಗದ ವತಿಯಿಂದ ಶಾಸಕರ ಅಪಹರಣದ ಸಂಚು ರೂಪಿಸಿ ಕಾರ್ಯರೂಪಕ್ಕೆ ತರಲಾಗಿದೆ. ಇದು ನಕ್ಸಲರ ಕೃತ್ಯ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.