ಭುವನೇಶ್ವರ (ಪಿಟಿಐ): ಅವಳಿ ಒತ್ತೆಸೆರೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾವೋವಾದಿ ಗುಂಪುಗಳು ನೀಡಿರುವ ಗಡುವು ಮಂಗಳವಾರ ಅಂತ್ಯಗೊಳ್ಳುವ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಬಂಡುಕೋರರ ಹೊಸ ಬೇಡಿಕೆಗಳ ಬಗ್ಗೆ ಒಡಿಶಾ ಸರ್ಕಾರ ತನ್ನ ನಿಲುವನ್ನು ಬಿಗಿಗೊಳಿಸಿದೆ.
ಬಿಜೆಪಿ ಶಾಸಕ ಜ್ಹೀನಾ ಹಿಕಾಕ ಮತ್ತು ಇಟಲಿ ಪ್ರಜೆ ಪಾವ್ಲೊ ಬೊಸುಸ್ಕೊ ಬಿಡುಗಡೆಗಾಗಿ ಸರ್ಕಾರವು ಕಟ್ಟಾ ಉಗ್ರವಾದಿಗಳನ್ನು ಬಿಡುಗಡೆ ಮಾಡಿದರೆ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಬಹಿಷ್ಕರಿಸುವುದಾಗಿ ರಾಜ್ಯ ಪೊಲೀಸರು ಬೆದರಿಕೆ ಹಾಕುವುದರೊಂದಿಗೆ ಬಿಕ್ಕಟ್ಟು ಇನ್ನಷ್ಟು ತಾರಕಕ್ಕೆ ಏರಿದೆ.
ಈ ಮಧ್ಯೆ ಉನ್ನತ ಮಾವೋವಾದಿ ನಾಯಕ ಸವ್ಯಸಾಚಿ ಪಂಡಾ ಅವರ ಪತ್ನಿ ಸುಭಾಶ್ರೀ ದಾಸ್ ಯಾನೆ ಮಿಲಿ ಪಂಡಾ ಅವರನ್ನು ಗುನಾಪುರ ನ್ಯಾಯಾಲಯವು ಮಂಗಳವಾರ ರಾಯಗಡ ಜಿಲ್ಲೆಯ ಕುಟಿಂಗುಡ ಅರಣ್ಯದಲ್ಲಿ ಸಂಭವಿಸಿದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಮುಕ್ತಿಗೊಳಿಸಿದೆ. ಸುಭಾಶ್ರೀ ದಾಸ್ ಬಿಡುಗಡೆ ಉಗ್ರಗಾಮಿಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಸಾಕ್ಷ್ಯಾಧಾರಗಳ ಕೊರತೆ ನೆಲೆಯಲ್ಲಿ ಸುಭಾಶ್ರೀ ದಾಸ್ ಅವರನ್ನು ನ್ಯಾಯಾಲಯವು ದೋಷಮುಕ್ತಿಗೊಳಿಸಿ ತೀರ್ಪು ನೀಡುತ್ತಿದ್ದಂತೆಯೇ ಸರ್ಕಾರ ಅವರನ್ನು ಬಿಡುಗಡೆ ಮಾಡಿದೆ ಎಂದು ಆಕೆಯ ವಕೀಲ ಬ್ರಹ್ಮಾನಂದ ಪಟ್ನಾಯಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.