ADVERTISEMENT

‘ಒಳನುಸುಳಲು ಕಾಯುತ್ತಿರುವ ಉಗ್ರರು’

ಪಿಟಿಐ
Published 26 ಫೆಬ್ರುವರಿ 2018, 19:50 IST
Last Updated 26 ಫೆಬ್ರುವರಿ 2018, 19:50 IST

ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಮೂಲಕ ಕಾಶ್ಮೀರ ಕಣಿವೆಗೆ ನುಸುಳಲು ದೊಡ್ಡ ಸಂಖ್ಯೆಯಲ್ಲಿ ಉಗ್ರರು ಕಾಯುತ್ತಿದ್ದಾರೆ ಎಂದು ಸೇನೆಯ ಹಿರಿಯ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಎ. ಕೆ. ಭಟ್‌ ಹೇಳಿದ್ದಾರೆ.

‘ಲೇಪಾ ಕಣಿವೆಯಿಂದ ಮಂಡಲ್‌ ಪ್ರದೇಶದವರೆಗೆ, ರಾಮ್‌ಪುರ ಹಾಗೂ ಇನ್ನಿತರ ಸ್ಥಳಗಳಲ್ಲಿ ಸುಮಾರು 30 ರಿಂದ 40 ಉಗ್ರರ ಗುಂಪುಗಳು ಕಾಯುತ್ತಿವೆ ಎಂಬ ಖಚಿತ ಮಾಹಿತಿ ನಮಗೆ ಲಭ್ಯವಾಗಿದೆ. ಅವರು ಒಳನುಸುಳಲು ಯತ್ನಿಸಿದರೆ, ಭಾರತ ತಕ್ಕ ಪ್ರತಿಕ್ರಿಯೆ ನೀಡಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಹಿಮ ಬೀಳುವ ಪ್ರಮಾಣ ಕಡಿಮೆಯಾಗಿರುವ ಕಾರಣ ಈ ವರ್ಷ ಉಗ್ರರ ಒಳನುಸುಳುವಿಕೆ ‍ಪ್ರಯತ್ನ ಇನ್ನೇನು ಆರಂಭವಾಗಲಿದೆ. ಭಾರತ ಪ್ರವೇಶಿಸಲು ಪಾಕಿಸ್ತಾನವು ಉಗ್ರರಿಗೆ ನೆರವು ನೀಡುತ್ತಿದೆ. ಅದು ಪದೇ ಪದೇ ಕದನವಿರಾಮ ಉಲ್ಲಂಘಿಸುತ್ತಿರುವುದಕ್ಕೆ ಇದು ಒಂದು ಕಾರಣ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಒಳನುಸುಳುವಿಕೆ ಯತ್ನ ವಿಫಲ (ಜಮ್ಮು ವರದಿ):ಇಲ್ಲಿನ ಸಾಂಬಾ ಜಿಲ್ಲೆಯ ಬಳಿ ಇರುವ ಅಂತರರಾಷ್ಟ್ರೀಯ ಗಡಿ ಮೂಲಕ ಭಾರತಕ್ಕೆ ನುಸುಳಲು ಮುಂದಾದ ಉಗ್ರರ ಪ್ರಯತ್ನವನ್ನು ಗಡಿ ಭದ್ರತಾ ಪಡೆಗಳು ವಿಫಲಗೊಳಿಸಿವೆ.

ರಾಮ್‌ಘರ್‌ ವಲಯದಲ್ಲಿನ ಅಂತರರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಿದ್ದರಿಂದ ಗಡಿ ಭದ್ರತಾ ಪಡೆಗಳು ಹಲವು ಸುತ್ತಿನ ಗುಂಡು ಹಾರಿಸಿವೆ. ಇದರಿಂದ, ಶಂಕಿತ ಉಗ್ರರು ಒಳನುಸುಳುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.