ADVERTISEMENT

ಒಳ ಮೀಸಲಾತಿ: ಪ್ರಣಾಳಿಕೆಯ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಮುಸ್ಲಿಮರ ಮೀಸಲು ಪ್ರಮಾಣ ದ್ವಿಗುಣಗೊಳಿಸುವ ಘೋಷಣೆ ಮಾಡಿ ಚುನಾವಣಾ ಆಯೋಗದಿಂದ ಪಡೆದಿದ್ದ ನೋಟಿಸ್‌ಗೆ ಉತ್ತರಿಸಿರುವ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಪಕ್ಷದ ಪ್ರಣಾಳಿಕೆ ಮಾತ್ರ ತಾವು ಪ್ರಸ್ತಾವ ಮಾಡಿರುವುದಾಗಿ ಹೇಳಿದ್ದಾರೆ.

ಕಾನೂನು ಸಚಿವರು ಚುನಾವಣಾ ನೀತಿ- ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಲ್ಮಾನ್ ಖುರ್ಷಿದ್ ಆಯೋಗದಿಂದ ನೋಟಿಸ್ ಪಡೆದಿದ್ದರು. ಕಳೆದ ಲೋಕಸಭಾ ಚುನಾವಣೆಗಾಗಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಈ ಅಂಶ ಉಲ್ಲೇಖವಾಗಿದೆ. ಅದನ್ನು ಮಾತ್ರ ತಾವು ಪ್ರಸ್ತಾವ ಮಾಡಿರುವುದಾಗಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಇನ್ನೂ ಚುನಾವಣಾ ಪ್ರಕ್ರಿಯೆ ಶುರುವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿಲ್ಲ. ವಸ್ತುಸ್ಥಿತಿ ಹೀಗಿರುವಾಗ ನೀತಿ,  ಸಂಹಿತೆ ಉಲ್ಲಂಘಿಸಿದ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಜಾಥಾ ಒಂದರಲ್ಲಿ ತಾವು ಮಾಡಿದ ಭಾಷಣವನ್ನು ವಿವಾದ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಲು ಉದ್ದೇಶಿಸಿರುವ ಶೇ.4.5 ಮೀಸಲಾತಿಗೆ ಚುನಾವಣಾ ಆಯೋಗ ತಡೆ ನೀಡಿದೆ. ಹಿಂದುಳಿದ ವರ್ಗಗಳ ಶೇ.27ರಲ್ಲಿ ಸೇರಿರುವ ಅಲ್ಪಸಂಖ್ಯಾತರ ಮೀಸಲಾತಿಗೆ ಐದು ರಾಜ್ಯಗಳ ವಿಧಾನಸಭೆಗಳ ಚುನಾವಣೆ ಪೂರ್ಣ ಆಗುವವರೆಗೂ ತಡೆ ನೀಡಿದೆ.

ಐದು ರಾಜ್ಯಗಳ ವಿಧಾನಸಭೆ ಘೋಷಣೆಯಾಗುವ ಸ್ವಲ್ಪ ಮೊದಲು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ತೀರ್ಮಾನ ಪ್ರಕಟಿಸಿತ್ತು. ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ತಂತ್ರ ಈ ನಿರ್ಧಾರದ ಹಿಂದಿದೆ ಎಂಬ ಟೀಕೆ ಕೇಳಿಬಂದಿತ್ತು. ಮೀಸಲಾತಿ ಭರವಸೆ ಇತರ ಪಕ್ಷಗಳನ್ನು ಸಮಾನ ಸ್ಪರ್ಧೆಯಿಂದ ವಂಚಿಸಲಿದೆ ಎಂದು ಆಯೋಗ ಹೇಳಿದೆ.

ಆಯೋಗದ ತೀರ್ಮಾನವನ್ನು ಬಿಜೆಪಿ ಸ್ವಾಗತಿಸಿದೆ. ಸರ್ಕಾರದ ತೀರ್ಮಾನ ಹಿಂದುಳಿದ ವರ್ಗ ಹಾಗೂ ಮುಸ್ಲಿಮರ ನಡುವೆ ಸಂಘರ್ಷ ಹುಟ್ಟುಹಾಕುವ ಉದ್ದೇಶದಿಂದ ಕೂಡಿದೆ. ಚುನಾವಣಾ ಆಯೋಗದಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.