ADVERTISEMENT

ಓಂಬುಡ್ಸ್‌ಮನ್: ಅಭಿಪ್ರಾಯ ಕೋರಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಲೋಕಪಾಲ ಮಸೂದೆಯನ್ನು ಅಧ್ಯಯನ ಮಾಡುತ್ತಿರುವ ಸಂಸದೀಯ ಸಮಿತಿಯು `ಭ್ರಷ್ಟಾಚಾರ ನಿಗ್ರಹ ಓಂಬುಡ್ಸಮನ್~ ರಚನೆಗೆ ಸಂಬಂಧಿಸಿದಂತೆ ಸುಪೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಕರ್ನಾಟಕದ ಎಂ.ಎನ್. ವೆಂಕಟಾಚಲಯ್ಯ ಮತ್ತು ಜೆ.ಎಸ್. ವರ್ಮಾ ಅವರ ಅಭಿಪ್ರಾಯವನ್ನು ಕೇಳಿದೆ.

ಮುಂದಿನ ತಿಂಗಳು 8-10 ದಿನಗಳ ಕಾಲ ನಡೆಯಲಿರುವ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಹಾಗೂ ನ್ಯಾಯಾಂಗದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಲೋಕಪಾಲ ಮಸೂದೆಗೆ ಸಂಬಂಧಿಸಿದ ಅಭಿಪ್ರಾಯ ದಾಖಲಿಸಲು ವೆಂಕಟಾಚಲಯ್ಯ ಮತ್ತು ವರ್ಮಾ ಅವರನ್ನು ಆಹ್ವಾನಿಸಲಾಗಿದೆ.

1993-94ರ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೆಂಕಟಾಚಲಯ್ಯ ಅವರು ಸಂವಿಧಾನದ ಕಾರ್ಯನಿರ್ವಹಣೆಯ ಪರಿಶೀಲನೆಗಾಗಿ ರಚನೆಯಾಗಿದ್ದ ರಾಷ್ಟ್ರೀಯ ಆಯೋಗದ ನೇತೃತ್ವವನ್ನೂ ವಹಿಸಿದ್ದರು.

`ಲೋಕಪಾಲ ರಚನೆ ತನ್ನದೇ ಮಿತಿಯನ್ನು ಹೊಂದಿದ್ದು, ಸಂವಿಧಾನ ಸುರಕ್ಷತೆಗಿರುವ ಇತರ ಎಲ್ಲ ಸಂಸ್ಥೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಅದು ಉಳಿಯಲು ಸಾಧ್ಯ~ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ ವರ್ಮಾ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮೇಲಿನ ಮೊದಲ ತನಿಖಾ ಆಯೋಗದ ನೇತೃತ್ವ ವಹಿಸಿದ್ದು, ಹವಾಲಾ ಹಗರಣ ಮತ್ತು ಅಯೋಧ್ಯೆ ವಿವಾದ ಸೇರಿದಂತೆ ಹಲವು ಮಹತ್ವದ ತೀರ್ಪಿಗೆ ಹೆಸರಾದವರು.

ಪ್ರಸ್ತಾವಿತ ಲೋಕಪಾಲ ಮಸೂದೆಯ ವ್ಯಾಪ್ತಿಯಿಂದ ಉನ್ನತ ನ್ಯಾಯಾಂಗ ಮತ್ತು ಪ್ರಧಾನಿಯನ್ನು ಹೊರಗಿಡಬೇಕು ಹಾಗೂ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ಅನುಚಿತ ನಡವಳಿಕೆ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಸಲಹೆಗಳನ್ನು ಅವರು ಈಗಾಗಲೇ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.