ADVERTISEMENT

ಔಷಧಿಗಳಿಗೆ ಅನುಮತಿ: ಕೇಂದ್ರಕ್ಕೆ ಪರಮಾಧಿಕಾರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ನವದೆಹಲಿ (ಪಿಟಿಐ): ಒಟ್ಟು 17 ವಿಷಮಸ್ಥಿತಿಯ ಆರೋಗ್ಯದ ಸಂದರ್ಭಗಳಿಗೆ ಸಂಬಂಧಿಸಿದಂತೆ ಔಷಧಿಗಳ ಉತ್ಪನ್ನ, ಮಾರಾಟಕ್ಕೆ ಲೈಸನ್ಸ್ ನೀಡುವ ಅಧಿಕಾರ ಇನ್ನು ಮುಂದೆ ಕೇಂದ್ರ ಸರ್ಕಾರಕ್ಕೆ ಮಾತ್ರ ಸಿಗಲಿದೆ. ಈ ಸಂಬಂಧ ಮಂಡಿಸಲಾಗುವ ಹೊಸ ಮಸೂದೆ ಕೇಂದ್ರಕ್ಕೆ ಈ ಅಧಿಕಾರ ನೀಡಿದ್ದು ಈ ಮೂಲಕ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಔಷಧ ನಿಯಂತ್ರಣಾಧಿಕಾರಿಗಳಿಗೆ ಸಂಬಂಧಿಸಿದಂತೆ ಅಪೀಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಕೇಂದ್ರ ಔಷಧಿ ಪ್ರಾಧಿಕಾರವನ್ನು ಸಹ ಸ್ಥಾಪಿಸಲು ಹೊಸ ಮಸೂದೆಯಲ್ಲಿ ಪ್ರಸ್ತಾಪಮಾಡಲಾಗಿದೆ.
ಔಷಧಿಗಳು ಹಾಗೂ ಸೌಂದರ್ಯವರ್ಧಕಗಳ ಸಮಗ್ರ ನಿರ್ವಹಣೆಗೆ ಸಂಬಂಧಿಸಿದಂತೆ `ಔಷಧಿ ಹಾಗೂ ಸೌಂದರ್ಯವರ್ಧಕ ಮಸೂದೆ-2013' ಇದೀಗ ಸಿದ್ಧವಾಗಿದ್ದು ಕೇಂದ್ರ ಸಂಪುಟ ಗುರುವಾರ ತನ್ನ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹೊಸ ಮಸೂದೆ ಮಂಡಿಸುವಂತೆ ಆರೋಗ್ಯ ಸಚಿವಾಲಯ ಪ್ರಸ್ತಾವ ಸಲ್ಲಿಸಿದ್ದು ಇದು ಅನುಷ್ಠಾನಕ್ಕೆ ಬಂದಲ್ಲಿ ಈಗಿರುವ ಔಷಧಿ ಹಾಗೂ ಸೌಂದರ್ಯವರ್ಧಕ ಮಸೂದೆ-1940 (2008ರಲ್ಲಿ ತಿದ್ದುಪಡಿ) ರದ್ದಾಗುತ್ತದೆ.
ಆಸ್ಪತ್ರೆಗಳಲ್ಲಿ ಬಳಸಲಾಗುವ ಔಷಧಿ, ಶಸ್ತ್ರಚಿಕಿತ್ಸಾ ಉಪಕರಣಗಳ ನಿರ್ವಹಣೆಯ ಮೇಲೆ ನಿಗಾ ಇಡುವುದು ಸೇರಿದಂತೆ ಔಷಧಿಗಳು ಹಾಗೂ ಸೌಂದರ್ಯವರ್ಧಕ ವಸ್ತುಗಳ ಕುರಿತಂತೆ  ಸಮಗ್ರ ನೀತಿ ತಾಳುವ ಮಸೂದೆ ಇದಾಗಿದೆ. ಜತೆಗೆ ಇದರಿಂದ ದೇಶೀಯ ಔಷಧಿ ಉತ್ಪಾದನಾ ಉದ್ಯಮಕ್ಕೂ ಪುನಶ್ಚೇತನ ಸಿಕ್ಕಂತಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಔಷಧಿ ಬಳಕೆಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸಿ ಚಿಕಿತ್ಸೆ ನೀಡುವ ಸಂದರ್ಭ ರೋಗಿ ಮೃತಪಟ್ಟಲ್ಲಿ/ ಗಾಯಗೊಂಡಲ್ಲಿ ವಿಧಿಸಬೇಕಾದ ದಂಡ ಇಲ್ಲವೇ ಶಿಕ್ಷೆಯ ಪ್ರಮಾಣವನ್ನೂ ಹೊಸ ಮಸೂದೆಯಲ್ಲಿ ತಿಳಿಸಲಾಗಿದೆ. ಜೀವ ರಕ್ಷಕ ಔಷಧಿಗಳು, ಲಸಿಕೆಗಳು ಇಲ್ಲವೆ ಡಿಎನ್‌ಎ ಉತ್ಪನ್ನಗಳು ಹೊಸ ಮಸೂದೆ ವ್ಯಾಪ್ತಿಗೆ ಬರಲಿವೆ.

ವಿವಿಧ ವೈದ್ಯಕೀಯ ಉಪಕರಣಗಳನ್ನೂ ಹೊಸ ಮಸೂದೆ ವ್ಯಾಪ್ತಿಗೆ ತರಲಾಗಿದ್ದು ಇವುಗಳ ನಿರ್ವಹಣೆಗೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರ ಪ್ರಕಟಿಸಲಾಗಿದೆ. ಸದ್ಯದ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶ ಇಲ್ಲ.

ಮಸೂದೆಗೆ ಕಾನೂನು ರೂಪ ಸಿಕ್ಕಲ್ಲಿ ಮೇಲ್ಕಾಣಿಸಿದ ಔಷಧಿಗಳಿಗೆ ಇಲ್ಲವೆ ವೈದ್ಯಕೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯಗಳ ಔಷಧಿ ನಿಯಂತ್ರಣಾಧಿಕಾರಿಗಳು ಈಗ ಹೊಂದಿರುವ ಅಧಿಕಾರ ಕಳೆದುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.