ADVERTISEMENT

ಕಕ್ಷೆ ಬದಲಾವಣೆ ಮಾಹಿತಿ ವಿಳಂಬ

ಮಂಗಳನೌಕೆಯಾನ: ತಡವಾಗಿ ಬಹಿರಂಗಪಡಿಸಿದ ಇಸ್ರೊ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:33 IST
Last Updated 3 ಡಿಸೆಂಬರ್ 2013, 19:33 IST

ಚೆನ್ನೈ (ಪಿಟಿಐ): ಮಂಗಳನೌಕೆಯನ್ನು ಕಳೆದ ಶನಿವಾರ ತಡರಾತ್ರಿ ಸೌರಕಕ್ಷೆಗೆ ವರ್ಗಾಯಿಸುವ ಅತ್ಯಂತ ‘ಸಂಕೀರ್ಣ’ ಮತ್ತು ‘ಮಹತ್ವದ’ ಪ್ರಕ್ರಿಯೆಯ ಸಂದರ್ಭದಲ್ಲಿ ಅಡಚಣೆಯೊಂದು ಎದುರಾಗಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವಿಷಯವನ್ನು ತಡವಾಗಿ ಬಹಿರಂಗ ಪಡಿಸಿದೆ.
ಮಂಗಳನೌಕೆಯು ಕಕ್ಷೆ ಬದಲಿಸುವ ಪ್ರಕ್ರಿಯೆಯ ಮೇಲೆ ನಿಗಾ ಇಟ್ಟಿದ್ದ ದಕ್ಷಿಣ ಆಫ್ರಿಕಾದ ಹಾರ್ಟೆಬಿಶಾಕ್‌ (ಎಚ್‌ಬಿಕೆ) ಕೇಂದ್ರದ ಮೇಲೆ ಸಿಡಿಲು ಬಡಿದ ಕಾರಣದಿಂದ ಐದು ನಿಮಿಷಗಳ ಕಾಲ ನೌಕೆಯ ಪಥದ ಮೇಲೆ ನಿಗಾ ಇಡಲು ಸಾಧ್ಯ­ವಾಗಿರಲಿಲ್ಲ ಎಂದು ‘ಇಸ್ರೊ’ ಹೇಳಿದೆ.

ನೌಕೆಯನ್ನು ಭೂಕಕ್ಷೆಯಿಂದ ಸೌರ ಕಕ್ಷೆಗೆ ವರ್ಗಾಯಿಸುವ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ ನೌಕೆಯ ಲಿಕ್ವಿಡ್‌ ಎಂಜಿನ್‌ ಕಾರ್ಯಾರಂಭ ಮಾಡುವುದಕ್ಕೂ ಕೆಲವೇ ಸೆಕೆಂಡುಗಳ ಮೊದಲು, ನೌಕೆಯ ಪಥದ ಜಾಡು ಹಿಡಿಯಲು ನಿಯೋಜಿಸಲಾಗಿದ್ದ ದಕ್ಷಿಣ  ಆಫ್ರಿಕಾದ ಎಚ್‌ಬಿಕೆ ಕೇಂದ್ರದ  ಭಾರಿ ಸಿಡಿಲು ಬಡಿಯಿತು. ಇದರಿಂದಾಗಿ ನೌಕೆಯ ಚಲನೆ ಮೇಲೆ ನಿಗಾ ಇಡಲು ಐದು ನಿಮಿಷಗಳ ವಿಳಂಬ­ವಾಯಿತು ಎಂದು ‘ಇಸ್ರೊ’ ತನ್ನ ಅಧಿಕೃತ ಸಾಮಾಜಿಕ ತಾಲತಾಣದ ಪುಟದಲ್ಲಿ ಹೇಳಿದೆ.

‘ಸಿಡಿಲು ಬಡಿದ ಕಾರಣದಿಂದಾಗಿ ದತ್ತಾಂಶಗಳು ಭೂಮಿಗೆ ರವಾನೆ­ಯಾಗಲಿಲ್ಲ. ಹಾಗಾಗಿ, ಎಂಜಿನ್‌ ಕಾರ್ಯಾರಂಭ ಮಾಡಿದ್ದು ದೃಢ­ಪಡಲು ಐದು ನಿಮಿಷ ತಡವಾಯಿತು. ಆದರೆ, ನಿಗದಿಯಂತೆ ಎಂಜಿನ್‌ ಕಾರ್ಯಾ­ರಂಭ ಮಾಡಿ ನೌಕೆಯನ್ನು ಭೂಮಿಯ ಪ್ರಭಾವಲಯ­ದಿಂದ ಸೂರ್ಯನ ಪ್ರಭಾವಲಯಕ್ಕೆ ಯಶಸ್ವಿ­ಯಾಗಿ ಕರೆ­ದೊಯ್ದಿತ್ತು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.