ADVERTISEMENT

ಕಡೆಗೂ ನಿನ್ನ ಬಿಡಲಿಲ್ಲ ನಾನು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:45 IST
Last Updated 21 ಫೆಬ್ರುವರಿ 2011, 16:45 IST


ಮುಂಬೈ (ಪಿಟಿಐ):    

ಬದಲೇ ತುಮನೇ ರಂಗ್ ಬಹುತ್,
ಬಹೂತ್ ಬದಲೇ ನಾಕಾಬ್,
ಫಾಂಸಿ ತಕ್ ಹಮ್ನೇ
ತುಮ್ಹೇ ಲಾಹಿ ದಿಯಾ ಕಸಾಬ್

(ಓ ಕಸಾಬ್, ಎಷ್ಟೊಂದು ಬಣ್ಣ, ಮುಖವಾಡಗಳನ್ನು ಬದಲಿಸಿದೆಯೊ ನೀನು;
ಏನಾದರೇನು? ಕಡೆಗೂ ಬಿಡಲಿಲ್ಲ, ನೇಣಿನ ಕುಣಿಕೆಗೊಯ್ಯುವ ಶಪಥವನ್ನು ನಾನು)

ಸೋಮವಾರ ಬಾಂಬೆ ಹೈಕೋರ್ಟ್ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್‌ಗೆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದ ನಂತರ ಕೋರ್ಟ್ ಹೊರಗಡೆ ಸರ್ಕಾರಿ ವಿಶೇಷ ವಕೀಲ ಉಜ್ವಲ್ ನಿಕ್ಕಂ ಪ್ರತಿಕ್ರಿಯಿಸಿದ ಪರಿಯಿದು.

ನಾಟಕದ ಖಳನಾಯಕ ಹಾಗೂ ಅಂಧ ಆತಂಕವಾದಿಗೆ ಕಡೆಗೂ ಕರುಣೆ ದಕ್ಕಲಿಲ್ಲ ಎಂದು ನಿಕ್ಕಂ ಹೇಳಿದರು.

ಕಸಾಬ್‌ನಂತಹ ಆತಂಕವಾದಿಯ ದಾರ್ಷ್ಟ್ಯತೆ ಎಷ್ಟಿತ್ತೆಂಬುದನ್ನು ಗಮನಿಸಲು ಆತನ ತಪ್ಪೊಪ್ಪಿಗೆ ಹೇಳಿಕೆಯನ್ನೇ ಗಮನಿಸಿದರೆ ಸಾಕು. ‘ಆವತ್ತು ನಾನು ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ಪ್ರವೇಶಿದಾಗ ಅಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಜನರಿದ್ದರು. ಹೀಗಾಗಿ ಹೆಚ್ಚಿನ ಜನರನ್ನು ನನ್ನಿಂದ ಕೊಲ್ಲಲಾಗಲಿಲ್ಲ ಎಂದಿದ್ದ’ ಇದು ಅವನ ಮನಸ್ಥಿತಿ.

ಮ್ಯಾಜಿಸ್ಟ್ರೇಟ್ ಮುಂದೆ ಈ ಹೇಳಿಕೆ ನೀಡುವಾಗ ಮುಂದುವರಿದ ಅವನು, ‘ಭಾರತದಲ್ಲಿ ಇನ್ನೂ ಹೆಚ್ಚಿನ ಉಗ್ರರು ತಯಾರಾಗಬೇಕಿದೆ’ ಎಂದಿದ್ದ. ಅವನಿಗೆ ತನ್ನ ಕೃತ್ಯದ ಬಗ್ಗೆ ಎಂದೂ ಪಶ್ಚಾತ್ತಾಪವಾಗಲೇ ಇಲ್ಲ. ಎಷ್ಟೋ ಬಾರಿ ಅವನು ವಿಚಾರಣೆಯ ದಿಕ್ಕನ್ನೇ ತಪ್ಪಿಸಲು ಪ್ರಯತ್ನಿಸಿದ. ತಾನು ಇನ್ನೂ ಅಲ್ಪವಯಸ್ಕ ಎನ್ನುವ ಮೂಲಕ ಗೊಂದಲ ಮೂಡಿಸಿದ. ಈಗ ಕಡೆಗೂ ಅವನು ಕರುಣೆಯ ಪರಿಧಿಯಿಂದ ದೂರವೇ ಉಳಿಯುವಂತಾದ’ ಎಂದು ನಿಕ್ಕಂ ತಿಳಿಸಿದರು.

ಉಜ್ವಲ್ ನಿಕ್ಕಂ ತಮ್ಮ 35 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಈ ತನಕ 615 ಜನ ಅಪರಾಧಿಗಳಿಗೆ ಜೀವಾವಧಿ ಮತ್ತು 35 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.